CONNECT WITH US  

ರೀಲ್‌ ಮದುವೆ ಅನುಭವ ಅನನ್ಯ!

ಹರ್ಷಿಕಾ ಎಂಬ ಕಲರ್‌ಫ‌ುಲ್‌ ಚಿಟ್ಟೆಯ ಹೊಂಗನಸು

ಅಂತೂ ಇಂತೂ ಹರ್ಷಿಕಾ ಪೂಣಚ್ಚ ಲೈಫ‌ಲ್ಲಿ ಮದುವೆ ಅಗಿ, ಹಾಗೊಂದು ಅನನ್ಯ ಅನುಭವ ಪಡೆದುಕೊಂಡಿದ್ದಾರೆ! ಹೀಗೆ‌ಂದಾಕ್ಷಣ ಅರೇ,  ಹರ್ಷಿಕಾ ಮದುವೆ ಆಗೋಯ್ತಾ ಎಂಬ ಪ್ರಶ್ನೆ ಎದುರಾಗೋದು ಸಹಜ. ಅದು ರಿಯಲ್‌ ಲೈಫ್ನಲ್ಲಿ ಅಲ್ಲ. ರೀಲ್‌ ಲೈಫ್ನಲ್ಲಿ. ಹೌದು, ಹರ್ಷಿಕಾ ಪೂಣಚ್ಚ ಇದೇ ಮೊದಲ ಸಲ ಗೃಹಿಣಿಯಾಗಿ ಕಾಣಿಸಿಕೊಂಡಿದ್ದಾರೆ. ಹಾಗೆ ಕಾಣಿಸಿಕೊಂಡಿರುವ ಚಿತ್ರ "ಚಿಟ್ಟೆ'.

ಈ ಚಿತ್ರದಲ್ಲಿ ನಿರ್ದೇಶಕ ಪ್ರಸನ್ನ ಅವರು ಹರ್ಷಿಕಾ ಅವರನ್ನಿಲ್ಲಿ ಗೃಹಿಣಿಯನ್ನಾಗಿಸಿದ್ದಾರೆ. ಹರ್ಷಿಕಾ ಇದುವರೆಗೆ ಸುಮಾರು ಹದಿನೆಂಟು ಚಿತ್ರಗಳಲ್ಲಿ ನಟಿಸಿದ್ದಾರೆ. ಯಾವ ಚಿತ್ರದಲ್ಲೂ ಅವರು ಗೃಹಿಣಿಯಾಗಿ ಕಾಣಿಸಿಕೊಂಡಿಲ್ಲ. ಕ್ಲೈಮ್ಯಾಕ್ಸ್‌ ವೇಳೆಗೆ ಮದುವೆ ಆಗಿರುವ ಉದಾಹರಣೆ ಬಿಟ್ಟರೆ, ಇಡೀ ಸಿನಿಮಾದುದ್ದಕ್ಕೂ ಹೆಂಡತಿ ಪಾತ್ರ ನಿರ್ವಹಿಸಿಲ್ಲ. ಇದೇ ಮೊದಲ ಸಲ "ಚಿಟ್ಟೆ' ಮೂಲಕ ಅವರು ಒಬ್ಬ ಒಳ್ಳೆಯ ಗಂಡನಿಗೆ ಒಳ್ಳೆಯ ಹೆಂಡತಿಯಾಗಿ ನಟಿಸಿದ್ದಾರೆ. 

"ಚಿಟ್ಟೆ' ಎಂಬ ಶೀರ್ಷಿಕೆ ಪಾತ್ರದಲ್ಲೇ ಹರ್ಷಿಕಾ ಕಾಣಿಸಿಕೊಂಡಿರುವುದು ಇನ್ನೊಂದು ವಿಶೇಷ. "ಬಿ3' ನಂತರ ಅವರು ಮಾಡಿದ ಚಿತ್ರಗಳೆಲ್ಲವೂ ಶೀರ್ಷಿಕೆಗೆ ಹತ್ತಿರವಾದ ಚಿತ್ರಗಳೇ. "ತಮಸ್ಸು' ಅಂದರೆ ಕತ್ತಲು. ಆ ಚಿತ್ರದಲ್ಲಿ ಹರ್ಷಿಕಾ ಪಾತ್ರ ಕೂಡ ಕತ್ತಲ ಕೂಪದಲ್ಲಿರುವ ಪಾತ್ರ. ಅಲ್ಲೂ ಅದೊಂದು ಮುಖ್ಯ ಪಾತ್ರ ಮಾಡಿದ್ದ ಹರ್ಷಿಕಾಗೆ, ಟೈಟಲ್‌ ಮೇಲೆ ಸಾಗುವ ಪಾತ್ರ ಸಿಗುತ್ತಾ ಬಂದವು. ಹರ್ಷಿಕಾಗೆ ಮರಸುತ್ತುವ ಪಾತ್ರಗಳಿಗಿಂತ, ಕಥೆ, ಪಾತ್ರದಲ್ಲಿ ಗಟ್ಟಿತನವಿದ್ದರೆ ಖುಷಿಯಂತೆ. ಅದು "ಚಿಟ್ಟೆ'ಯಲ್ಲಿದೆಯಂತೆ.

ಒಳ್ಳೆಯ ಕಥೆ ಬಗ್ಗೆಯಷ್ಟೇ ಗಮನಹರಿಸುತ್ತ ಬಂದಿರುವ ಹರ್ಷಿಕಾ, ಯಾವತ್ತಿಗೂ ಸುಮ್ಮನೆ ಕೂತಿಲ್ಲ. ಒಂದಲ್ಲ ಒಂದು ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳುತ್ತಿರುವ ಹರ್ಷಿಕಾಗೆ, "ಚಿಟ್ಟೆ' ಚಿತ್ರದ ಮೇಲೆ ಇನ್ನಿಲ್ಲದ ನಂಬಿಕೆ ಇದೆ. ಅದಕ್ಕೆ ಕಾರಣ, ಕಥೆ ಮತ್ತು ಪಾತ್ರವಂತೆ. ಕಲರ್‌ಫ‌ುಲ್‌ ಆಗಿರುವ ಪಾತ್ರದಲ್ಲಿ ಹಲವು ವಿಶೇಷತೆಗಳಿದ್ದು, ಆಗಷ್ಟೇ ಮದುವೆಯಾದ ಒಂದು ಜೋಡಿ, ಹೇಗೆಲ್ಲಾ ತಮ್ಮೊಳಗಿನ ಆಸೆ,

ಆಕಾಂಕ್ಷೆಗಳನ್ನು ವ್ಯಕ್ತಪಡಿಸುತ್ತಾ, ಖುಷಿಯಾಗಿ ಒಬ್ಬರನ್ನೊಬ್ಬರು ಕಾಲೆಳೆಯುತ್ತ ಲೈಫ್ ಎಂಜಾಯ್‌ ಮಾಡುತ್ತಾರೆ ಎಂಬುದರ ಮೇಲೆ ಕಥೆ ಸಾಗಲಿದೆಯಂತೆ. ಈಗಾಗಲೇ ಹರ್ಷಿಕಾ ಹುಟ್ಟುಹಬ್ಬದಂದು "ಚಿಟ್ಟೆ'ಯ ಟೀಸರ್‌ ಬಿಡುಗಡೆಯಾಗಿದ್ದು, ಎಲ್ಲೆಡೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿರುವ ಬಗ್ಗೆ ಹರ್ಷಿಕಾಗೂ ಖುಷಿ ಇದೆ.

ಹಲವು ಟ್ರೋಲ್‌ ಪೇಜ್‌ಗಳಲ್ಲಿ ಫೋಟೋ ಹಾಕಿ ವಿಭಿನ್ನ ಶೀರ್ಷಿಕೆ ಮೂಲಕ ಪೋಸ್ಟ್‌ ಮಾಡುತ್ತಿರುವುದನ್ನು ನೋಡಿ, "ಚಿಟ್ಟೆ' ಇನ್ನಷ್ಟು ಸ್ವತ್ಛಂದವಾಗಿ ಹಾರಾಡುವ ಕನಸು ಕಾಣುತ್ತಿದೆ ಎನ್ನುತ್ತಾರೆ ಹರ್ಷಿಕಾ. ಚಿತ್ರ ಪೂರ್ಣಗೊಂಡಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಚುನಾವಣೆ ಮುಗಿದ ಬಳಿಕ ಆಡಿಯೋ ಬಿಡುಗಡೆ ಮಾಡಿ, ಪ್ರೇಕ್ಷಕರ ಮುಂದೆ ತರುವ ಯೋಚನೆ ನಿರ್ದೇಶಕರಿಗಿದೆ. ಅದೇನೆ ಇರಲಿ,

"ಚಿಟ್ಟೆ' ಹೊಸ ಜೋಡಿಗೊಂದು ವಿಶೇಷ ಪ್ಯಾಕೇಜ್‌ ಸಿನಿಮಾ ಎಂಬುದು ಹರ್ಷಿಕಾ ಮಾತು. ಸದ್ಯಕ್ಕೆ ಹರ್ಷಿಕಾ ಈಗ ಚ್ಯೂಸಿಯಾಗಿದ್ದಾರೆ. ಕಥೆ, ಪಾತ್ರದ ಬಗ್ಗೆ ಹೆಚ್ಚು ಗಮನಹರಿಸುತ್ತಿದ್ದಾರೆ. ಹೊಸಬರ ಕಥೆಗಳೇ ಹೆಚ್ಚೆಚ್ಚು ಬರುತ್ತಿರುವುದರಿಂದ ಮತ್ತದೇ ಪಾತ್ರಗಳೇ ಅಲ್ಲಿ ಕಾಣಸಿಗುತ್ತಿವೆಯಂತೆ. ಹಾಗಾಗಿ, ಹೊಸದೇನನ್ನೋ ಬಯಸುತ್ತಿರುವ ಅವರಿಗೆ ಈಗ ಒಂದು ಕಥೆ ಸಿಕ್ಕಿದ್ದು, ಇಷ್ಟರಲ್ಲೇ ದೊಡ್ಡ ಪ್ರಾಜೆಕ್ಟ್ ಬಗ್ಗೆ ವಿಷಯ ಹಂಚಿಕೊಳ್ಳುವ ಭರವಸೆ ಕೊಡುತ್ತಾರೆ.


ಇಂದು ಹೆಚ್ಚು ಓದಿದ್ದು

Trending videos

Back to Top