CONNECT WITH US  

ಮನೆಯಲ್ಲಿ ಹೇಳಿದ್ದು ಸೇನೆಗೆ ನೇಮಕವಾದ ಮೇಲೆ !

ಬೆಳ್ತಂಗಡಿ: ಓದುವುದಕ್ಕೆ ಆಸಕ್ತಿ ಇದ್ದರೂ ಬೆಂಬಲ ನೀಡುವವರು ಇರಲಿಲ್ಲ. ಮನೆಯ ಆರ್ಥಿಕ ಪರಿಸ್ಥಿತಿಯೂ ಅಷ್ಟಕ್ಕಷ್ಟೆ. ಇವೆಲ್ಲದರ ನಡುವೆಯೂ ಹಸುರಾಗಿ ಇದ್ದದ್ದು ಸೇನೆ ಸೇರಿ ದೇಶಕ್ಕಾಗಿ ದುಡಿಯಬೇಕು ಎಂಬ ಹಂಬಲ.

ಅದು ಎಷ್ಟು ಬಲವಾಗಿತ್ತು ಎಂದರೆ, ಸೇನೆಗೆ ಕಳುಹಿಸುವುದಕ್ಕೆ ಹೆದರುತ್ತಾರೆ ಎಂಬ ಕಾರಣಕ್ಕೆ ಮನೆಯಲ್ಲಿ ಹೇಳದೆಯೇ ಸೇನಾ ನೇಮ ಕಾತಿ ರ್ಯಾಲಿಗೆ ಹೋಗಿದ್ದೆ. ಹೇಳಿದ್ದು ಸೇನೆಗೆ ಆಯ್ಕೆಯಾದ ಬಳಿಕವೇ!

ಭಾರತೀಯ ಸೇನೆಯಲ್ಲಿ ಯೋಧ ನಾಗಿರುವ ದಿನೇಶ್‌ ಕುಮಾರ್‌ ನೆನಪಿಸಿ ಕೊಳ್ಳುವುದು ಹೀಗೆ. ಬೆಳ್ತಂಗಡಿ ತಾಲೂಕಿನ ಮಚ್ಚಿನ ಗ್ರಾಮದ ಪರಗುಡ್ಡೆ (ಪಣಕಜೆ ಸಮೀಪ) ನಿವಾಸಿ ಕೊರಗಪ್ಪ ಸಾಲ್ಯಾನ್‌ ಹಾಗೂ ಪ್ರೇಮಾ ದಂಪತಿಯ ನಾಲ್ವರು ಪುತ್ರರಲ್ಲಿ ದಿನೇಶ್‌ ಕಿರಿಯವರು. ಪ್ರಸ್ತುತ ಮರಾಠ ರೆಜಿಮೆಂಟ್‌ನಲ್ಲಿ ಲ್ಯಾನ್ಸ್‌ ನಾಯಕ್‌ ಆಗಿ ಅರುಣಾಚಲ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ದಿನೇಶ್‌ ಅವರು ಪಿಯುಸಿ ಶಿಕ್ಷಣದ ಬಳಿಕ ಕಂಪ್ಯೂಟರ್‌ ಬೇಸಿಕ್‌ ಕೋರ್ಸ್‌ ಪೂರೈಸಿ ಬೆಳ್ತಂಗಡಿಯಲ್ಲಿ ಖಾಸಗಿ ಉದ್ಯೋಗಕ್ಕೆ ಸೇರಿದ್ದರು. ಆದರೆ ಸೇನೆಯನ್ನು ಸೇರಬೇಕು ಎಂಬ ಆಸೆ ಮನಸ್ಸಿನಲ್ಲಿ ಬಲವಾಗಿ ಬೇರೂರಿತ್ತು. ಉಜಿರೆಯ ನಿವೃತ್ತ ಸೈನಿಕರೊಬ್ಬರ ಮೂಲಕ ಸೇನಾ ಸೇರ್ಪಡೆಯ ಮಾಹಿತಿ ಪಡೆದರು. ಅದೇ ಸಂದರ್ಭದಲ್ಲಿ ಮಂಗಳೂರಿನಲ್ಲಿ ಸೇನಾ ನೇಮಕಾತಿ ರ್ಯಾಲಿ ನಡೆಯುವ ಬಗ್ಗೆ ದಿನಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಯಿತು.

ಮಂಗಳೂರಿನ ಕೂಳೂರಿನಲ್ಲಿ ನಡೆದ ನೇಮಕಾತಿ ರ್ಯಾಲಿಯಲ್ಲಿ ದಿನೇಶ್‌ ಆಯ್ಕೆಯಾಗಲಿಲ್ಲ. ಕಾರಣ ಸಮರ್ಪಕ ಜ್ಞಾನದ ಕೊರತೆ. ಒಂದು ಬಾರಿ ಸೋತರೂ ಸೆಳೆತ ಬಿಡಲಿಲ್ಲ. ಕಾರವಾರದ ರ್ಯಾಲಿಗೆ ತೆರಳಿ ಅಲ್ಲಿ ತೇರ್ಗಡೆ ಹೊಂದಿದರು. ಮನೆಯಲ್ಲಿ  ಹೆದರುತ್ತಾರೆ ಎಂಬ ಕಾರಣಕ್ಕೆ ಎರಡು ಬಾರಿಯೂ ರ್ಯಾಲಿಗೆ ಹೋಗುತ್ತಿರುವುದನ್ನು ಹೇಳಿರಲಿಲ್ಲ. ಆಯ್ಕೆ ಆದುದನ್ನು ಕೂಡ ತಾಯಿಗೆ ತಿಳಿಸದೆ ಅಣ್ಣಂದಿರಿಗೆ ಮಾತ್ರ ಹೇಳಿದ್ದರು!

ನಿವೃತ್ತ ಸೈನಿಕರ ಮೂಲಕ ಮಾಹಿತಿ
ಬಾಲ್ಯದಿಂದಲೂ ಸೇನೆ ಸೇರಬೇಕು ಎನ್ನುವ ಆಸೆ ಇತ್ತು. ಮತ್ತೂಂದೆಡೆ ಉನ್ನತ ವ್ಯಾಸಂಗಕ್ಕೆ ಬಡತನ ಅಡ್ಡಿಯಾಗಿತ್ತು. ಹೀಗಾಗಿ ಖಾಸಗಿ ಕೆಲಸವೊಂದಕ್ಕೆ ಸೇರಿಕೊಂಡು ಸೇನೆಗೆ ಸೇರುವ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದೆ. ಉಜಿರೆಯ ನಿವೃತ್ತ ಸೈನಿಕರೊಬ್ಬರು ಮಾರ್ಗದರ್ಶನ ಮಾಡಿದರು. 2ನೇ ಪ್ರಯತ್ನದಲ್ಲಿ  ಆಯ್ಕೆಯಾದೆ. ಮನೆಮಂದಿ ಹೆದರುತ್ತಾರೆ ಎಂಬ ಕಾರಣಕ್ಕೆ ಮನೆಯಲ್ಲೂ ಹೇಳಿರಲಿಲ್ಲ. ಆದರೆ ಈಗ ಮನೆಯವರಿಗೆ ನನ್ನ ಬಗ್ಗೆ ಹೆಮ್ಮೆ ಇದೆ, ನನ್ನಿಂದಾಗಿ ಸಮಾಜದಲ್ಲಿ  ಉತ್ತಮ ಗೌರವವೂ ಸಿಗುತ್ತಿದೆ.
- ದಿನೇಶ್‌ಕುಮಾರ್‌ಭಾರತೀಯ ಯೋಧ

ಒಂಬತ್ತು ವರ್ಷಗಳ ಸೇನಾನುಭವ
ದಿನೇಶ್‌ ಒಂಬತ್ತು ವರ್ಷಗಳಿಂದ ಸೇನೆಯಲ್ಲಿ ದುಡಿಯುತ್ತಿದ್ದಾರೆ. ಆರಂಭದ ಎರಡೂವರೆ ವರ್ಷ ಜಮ್ಮು-ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿದ್ದರು. ಬಳಿಕ ಎಂಟು ತಿಂಗಳ ಕಾಲ ವಿಶ್ವಸಂಸ್ಥೆಯ ಶಾಂತಿಪಾಲನ ಪಡೆಯ ಭಾಗವಾಗಿ ಆಫ್ರಿಕದ ಸುಡಾನ್‌ನಲ್ಲಿ ಕೆಲಸ ಮಾಡಿದ್ದಾರೆ. ಮುಂದೆ ಹೊಸದಿಲ್ಲಿ, ಗುಜರಾತ್‌ನ ಜಾಮ್‌
ನಗರ, ಕೊಲ್ಹಾಪುರ, ಪುಣೆ ಮತ್ತು ಪಂಜಾಬ್‌ನ ಫಿರೋಜ್‌ಪುರಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಈಗ ಎಂಟು ತಿಂಗಳುಗಳಿಂದ ಅರುಣಾಚಲ ಪ್ರದೇಶದಲ್ಲಿದ್ದಾರೆ.

ಮಗನ ಪರವಾಗಿ ಗೌರವ
ನಾನು ಎಂದಿಗೂ ಸ್ಟೇಜ್‌ ಹತ್ತಿದವಳಲ್ಲ. ಆದರೆ ಮಗನ ಪರವಾಗಿ ಎರಡು - ಮೂರು ಕಡೆ ಸಮ್ಮಾನ ಸ್ವೀಕರಿಸುವ ಅವಕಾಶ ಲಭಿಸಿತ್ತು. ಆರಂಭದಲ್ಲಿ ಅವನು ಸೇನೆಗೆ ಹೋಗುವ ಬಗ್ಗೆ ಆತಂಕವಿತ್ತು. ಆದರೆ ಈಗ ಮಗನ ಆಯ್ಕೆ ಹಾಗೂ ಸಾಧನೆಯನ್ನು ಕಂಡು ಹೆಮ್ಮೆ ಎನಿಸುತ್ತದೆ. 
-ಪ್ರೇಮಾ, ದಿನೇಶ್‌ ಅವರ ತಾಯಿ.

ವಿದೇಶದಲ್ಲಿ ಕೆಲಸ ಮಾಡಿದ ಅನುಭವ
ದಿನೇಶ್‌ ಅವರು ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಭಾಗವಾಗಿ ಆಂತರಿಕ ಯುದ್ಧ ಪೀಡಿತ ಆಫ್ರಿಕದ ಸುಡಾನ್‌ನಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಅಲ್ಲಿನ ವಿಚಿತ್ರ ಅನುಭವಗಳು ಅವರ ಬತ್ತಳಿಕೆಯಲ್ಲಿವೆ. "ಜನಾಂಗೀಯ ಘರ್ಷಣೆ ಅಲ್ಲಿ ನಿತ್ಯ ನಿರಂತರ ಎಂಬಂತೆ ನಡೆಯುತ್ತಿದ್ದವು. ನಾನಲ್ಲಿ ಇದ್ದಾಗಲೇ ಒಂದು ಬಾರಿ ಆಂತರಿಕ ಕಲಹ ದೊಡ್ಡ ಮಟ್ಟದಲ್ಲಿ ಸ್ಫೋಟಗೊಂಡು ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದರು. ಬಳಿಕ ನಮ್ಮದೇ ಜೆಸಿಬಿ ಯಂತ್ರದ ಮೂಲಕ ಹೊಂಡ ತೋಡಿ ರಾಶಿ ಹೆಣಗಳನ್ನು ಹೂಳಬೇಕಾಯಿತು. 
ಅದನ್ನು ನೆನೆಯುವಾಗ ಮೈ ಜುಮ್ಮೆನ್ನುತ್ತದೆ' - ಇದು ದಿನೇಶ್‌ ಮಾತು. 

ಅಲ್ಲಿ ನಿತ್ಯವೂ ಗುಂಡಿನ ಚಕಮಕಿ
ಜಮ್ಮು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆಯ ಬಳಿ ಕರ್ತವ್ಯ ನಿರ್ವಹಿಸುವುದು ಎಂದರೆ "ದೇಶ ಕಾಯುವ ಕೆಲಸ'ದ ಸಾಕಾರ ರೂಪ. ಆ ದಿನಗಳನ್ನು ಜೀವನದಲ್ಲಿ  ಎಂದಿಗೂ ಮರೆಯಲು ಸಾಧ್ಯವಿಲ್ಲ. ಬಾಂಬ್‌ ಸ್ಫೋಟ, ಗುಂಡಿನ ಚಕಮಕಿ ನಿತ್ಯವೂ  ಸಂಭವಿಸುತ್ತಿತ್ತು. ಹಿಮಪಾತ, ನೀರ್ಗಲ್ಲು  ಕುಸಿತ ಅಲ್ಲಿ ಸಾಮಾನ್ಯ. ಒಂದು ಬಾರಿ ನಾನು ನಿಂತ ಸ್ಥಳವೂ ಕುಸಿದು ಹಲವು ಅಡಿಗಳಷ್ಟು ಆಳಕ್ಕೆ ಬಿದ್ದಿದ್ದೆ. ಬಳಿಕ ಸಹೋದ್ಯೋಗಿಗಳು ಬಚಾವ್‌ ಮಾಡಿದ್ದರು - ದಿನೇಶ್‌ ನೆನಪಿಸಿಕೊಳ್ಳುತ್ತಾರೆ.


ಇಂದು ಹೆಚ್ಚು ಓದಿದ್ದು

Trending videos

Back to Top