CONNECT WITH US  

ಅಪರಾಧ ಹಿನ್ನೆಲೆ ಅಭ್ಯರ್ಥಿಗಳು: ಮತದಾರರೇ ಜಾಗೃತರಾಗಬೇಕು

ರಾಜ್ಯ ವಿಧಾನಸಭೆಗೆ ಸ್ಪರ್ಧಿಸುತ್ತಿರುವ 2560 ಅಭ್ಯರ್ಥಿಗಳ ಪೈಕಿ 391 ಮಂದಿ ವಿರುದ್ಧ ಕ್ರಿಮಿನಲ್‌ ಕೇಸ್‌ಗಳು ದಾಖಲಾಗಿವೆ. ಕ್ರಿಮಿನಲ್‌ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿರುವುದರಲ್ಲಿ ಮುಖ್ಯವಾಹಿನಿಯ ಮೂರು ಪಕ್ಷಗಳೇ ಮುಂಚೂಣಿಯಲ್ಲಿವೆ. ಬಿಜೆಪಿಯ 83, ಕಾಂಗ್ರೆಸಿನ 59 ಮತ್ತು ಜೆಡಿಎಸ್‌ನ 41 ಅಭ್ಯರ್ಥಿಗಳ ವಿರುದ್ಧ ಕೊಲೆಯಿಂದ ಹಿಡಿದು ಲೈಂಗಿಕ ಹಿಂಸೆಯಂತಹ ಗಂಭೀರ ಸ್ವರೂಪದ ಕೇಸ್‌ಗಳು ದಾಖಲಾಗಿವೆ ಎಂಬ ಅಂಶವನ್ನು ಅಸೋಸಿಯೇಶನ್‌ ಫಾರ್‌ ಡೆಮಾಕ್ರಟಿಕ್‌ ರಿಫಾಮ್ಸ್‌ì (ಎಡಿಆರ್‌) ಬಹಿರಂಗಪಡಿಸಿದೆ. ನಾಲ್ಕು ಅಭ್ಯರ್ಥಿಗಳ ವಿರುದ್ಧ ಕೊಲೆ ಕೇಸಿದೆ, 25 ಅಭ್ಯರ್ಥಿಗಳು ಕೊಲೆ ಯತ್ನದ ಪ್ರಕರಣ ಎದುರಿಸುತ್ತಿದ್ದಾರೆ. 23 ಅಭ್ಯರ್ಥಿಗಳ ವಿರುದ್ಧ ಮಹಿಳಾ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಎಡಿಆರ್‌ ದೇಶದಲ್ಲಿ ಚುನಾವಣಾ ವ್ಯವಸ್ಥೆಯನ್ನು ಸುಧಾರಿಸುವ ಮೂಲಕ ಪ್ರಜಾತಂತ್ರವನ್ನು ಬಲಪಡಿಸಲು ಪ್ರಯತ್ನಿಸುತ್ತಿಸುವ ಸ್ವಯಂ ಸೇವಾ ಸಂಸ್ಥೆ. ಪ್ರತಿ ಚುನಾವಣೆ ಸಂದರ್ಭದಲ್ಲಿ ಈ ಸಂಸ್ಥೆ ಅಭ್ಯರ್ಥಿಗಳು ಸಲ್ಲಿಸುವ ಅಫಿಡವಿಟ್‌ಗಳನ್ನು ಅಧ್ಯಯನ ಮಾಡಿ ಯಾರೆಲ್ಲ ಕ್ರಿಮಿನಲ್‌ ಕೇಸ್‌ಹೊಂದಿದ್ದಾರೆ, ಯಾರ ಆಸ್ತಿ ಎಷ್ಟು ಎಂಬಿತ್ಯಾದಿ ಮಾಹಿತಿಗಳನ್ನು ಜನರ ಮುಂದಿಡುತ್ತದೆ. 

ರಾಜಕೀಯ ಪಕ್ಷಗಳು ಕಾನೂನು ಪಾಲಿಸಬೇಕು, ನೈತಿಕತೆಗೆ ಉನ್ನತ ಮೌಲ್ಯ ಕೊಡುಬೇಕೆನ್ನುವುದು ಜನರ ನಿರೀಕ್ಷೆ. ಆದರೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಹಿನ್ನೆಲೆಯಲ್ಲಿ ಗಮನಿಸುವಾಗ ಇಂತಹ ಸದಾಶಯದ ನಿರೀಕ್ಷೆಗಳೆಲ್ಲ ಹುಸಿಯಾಗುತ್ತಿವೆ. ಕರ್ನಾಟಕದ ಉದಾಹರಣೆ ಯನ್ನೇ ತೆಗೆದುಕೊಂಡರೆ 2013ಕ್ಕಿಂತ ಹೆಚ್ಚಿನ ಸಂಖ್ಯೆಯ ಕ್ರಿಮಿನಲ್‌ ಹಿನ್ನೆಲೆಯುಳ್ಳ ಅಭ್ಯರ್ಥಿಗಳು 2018ರಲ್ಲಿದ್ದಾರೆ. ಚುನಾವಣೆ ಕಾಲಕ್ಕಾಗುವಾಗ ಪಕ್ಷಗಳು ಎಲ್ಲ ಆದರ್ಶಗಳನ್ನು ಗಾಳಿಗೆ ತೂರುತ್ತವೆ. ಗೆಲ್ಲುವ ಸಾಮರ್ಥ್ಯವೇ ಟಿಕೆಟ್‌ ಹಂಚಿಕೆಗೆ ಮಾನದಂಡವಾಗುತ್ತದೆ. ಹೀಗಾಗಿ ಎಷ್ಟೇ ಕೇಸ್‌ಗಳು ದಾಖಲಾಗಿದ್ದರೂ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಸಿಗುತ್ತದೆ. ಇವೆಲ್ಲ ರಾಜಕೀಯ ಕಾರಣಗಳಿಗಾಗಿ ದಾಖಲಾಗಿರುವ ಪ್ರಕರಣಗಳು ಎನ್ನುವುದು ಎಲ್ಲ ಪಕ್ಷಗಳು ಸಾಮಾನ್ಯವಾಗಿ ನೀಡುವ ಸಬೂಬು. ನಮ್ಮ ದೇಶದ ಕಾನೂನೇ ವಿಚಿತ್ರವಾಗಿದೆ. ಇಲ್ಲಿ ಚಿಕ್ಕದೊಂದು ಕಳ್ಳತನ ಪ್ರಕರಣ ದಾಖಲಾಗಿದ್ದರೂ ಸರಕಾರಿ ಕಚೇರಿಯಲ್ಲಿ ಜವಾನನ ನೌಕರಿಗೂ ಅನರ್ಹನಾಗುತ್ತಾನೆ. ಆದರೆ ಕೊಲೆಯಂತಹ ಗಂಭೀರ ಕೇಸ್‌ ದಾಖಲಾಗಿದ್ದರೂ ಯಾವುದೇ ಅಡ್ಡಿಯಿಲ್ಲದೆ ಚುನಾವಣೆಗೆ ಸ್ಪರ್ಧಿಸಿ ಎಂಪಿಯೋ ಎಮ್ಮೆಲ್ಲೆಯೋ ಆಗಬಹುದು ಎಂಬ ವಿಡಂಬನೆಯಲ್ಲಿ ಅರ್ಥವಿಲ್ಲದಿಲ್ಲ. ಕ್ರಿಮಿನಲ್‌ ಹಿನ್ನೆಲೆಯವರು ಚುನಾವಣೆಗೆ ಸ್ಪರ್ಧಿ ಸುವುದನ್ನು ತಡೆಯುವ ಪ್ರಯತ್ನ ಕೆಲ ವರ್ಷಗಳ ಹಿಂದೆಯೇ ಪ್ರಾರಂಭ ವಾಗಿದ್ದರೂ ಅದಕ್ಕೇ ಹೇಳಿಕೊಳ್ಳುವಂತಹ ಯಶ ಸಿಕ್ಕಿಲ್ಲ. ನಿರ್ದಿಷ್ಟವಾಗಿ ಮುಖ್ಯವಾಹಿನಿಯ ರಾಜಕೀಯ ಪಕ್ಷಗಳಿಂದಲೇ ಈ ಪ್ರಯತ್ನಕ್ಕೆ ಪ್ರಬಲ ವಿರೋಧ ವ್ಯಕ್ತವಾಗಿದೆ. 2013ರಲ್ಲೇ ಅಪರಾಧ ಹಿನ್ನೆಲೆಯವರು ಚುನಾವಣೆಗೆ ಸ್ಪರ್ಧಿಸುವುದನ್ನು ತಡೆಯಲು ತಡೆಯುವ ಸಲುವಾಗಿ ಸುಪ್ರೀಂ ಕೋರ್ಟ್‌ ಜನಪ್ರತಿನಿಧಿ ಕಾಯಿದೆಗೆ ತಿದ್ದುಪಡಿ ಮಾಡಲು ಆದೇಶಿಸಿತ್ತು. ಚುನಾವಣಾ ಆಯೋಗವೂ ಐದು ವರ್ಷಕ್ಕೆ ಮೇಲ್ಪಟ್ಟು ಜೈಲು ಶಿಕ್ಷೆಯಾಗಲಿರುವ ಪ್ರಕರಣಗಳಲ್ಲಿ ಆರೋಪಿಗಳಾಗಿರುವವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ನೀಡಬಾರದು ಎಂಬ ಕಾನೂನು ರಚಿಸಲು ಶಿಫಾರಸು ಮಾಡಿದೆ. ಕಾನೂನು ಸಚಿವಾಲಯವೂ ಈ ಮಾದರಿಯ ಕರಡು ಸಿದ್ಧಪಡಿಸಿದ್ದರೂ ಎಲ್ಲವೂ ಧೂಳು ತಿನ್ನುತ್ತಿವೆ. ಕೇಸ್‌ ದಾಖಲಾಗಿದೆ ಎಂದ ಮಾತ್ರಕ್ಕೆ ಚುನಾವಣೆಗೆ ಸ್ಪರ್ಧಿಸದಂತೆ ಮಾಡಿದರೆ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆಂಬ ವಾದವನ್ನು ಮುಂದಿಡ ಲಾಗಿದೆ. ಆದರೆ ನ್ಯಾಯಾಲಯ ಹೇಳಿರುವುದು ಬರೀ ಕೇಸ್‌ ದಾಖಲಾದ ವಿಚಾರವಲ್ಲ, ನ್ಯಾಯಾಲಯ ದೋಷಾರೋಪ ಹೊರಿಸಿದವರ ವಿಚಾರವನ್ನು ಎನ್ನುವ ಅಂಶವನ್ನು ಉದ್ದೇಶಪೂರ್ವಕ ಮರೆಮಾಚ ಲಾಗುತ್ತದೆ. ಒಬ್ಬ ವ್ಯಕ್ತಿಯ ವಿರುದ್ಧ ದೋಷಾರೋಪ ಹೊರಿಸಿದರೆ ಆ ಪ್ರಕರಣದಲ್ಲಿ ಹುರುಳಿದೆ ಎಂದೇ ಅರ್ಥ. ನ್ಯಾಯಾಧೀಶರು ಸಾಕಷ್ಟು ವಾದ-ಪ್ರತಿವಾದಗಳನ್ನು ಆಲಿಸಿರುತ್ತಾರೆ. ಹೀಗಾಗಿ ಇದು ಪಕ್ಷಗಳು ತಮ್ಮ ಮುಖ ಉಳಿಸಿಕೊಳ್ಳಲು ಆಡುವ ಆಟವಷ್ಟೆ. ಇದರ ಅರ್ಥ ಇಷ್ಟೆ ರಾಜಕೀಯ ಪಕ್ಷಗಳಿಗಾಗಲಿ, ಸರಕಾರಕ್ಕಾಗಲಿ ರಾಜಕೀಯದ ಅಪರಾಧೀ ಕರಣವನ್ನು ತಡೆಯುವ ಇಚ್ಛಾಶಕ್ತಿಯಿಲ್ಲ. 

ಪ್ರತಿ ಚುನಾವಣೆಯಲ್ಲಿ ಕಣದಲ್ಲಿರುವ ಕ್ರಿಮಿನಲ್‌ ಹಿನ್ನೆಲೆ ಅಭ್ಯರ್ಥಿಗಳ ಕುರಿತು ಚರ್ಚೆಯಾಗುತ್ತದೆ, ರಾಜಕೀಯದ ಅಪರಾಧೀಕರಣ ಕುರಿತು ಕಳವಳ ವ್ಯಕ್ತವಾಗುತ್ತದೆ, ಎಡಿಆರ್‌ನಂತಹ ಹತ್ತಾರು ವರದಿಗಳು ಬರುತ್ತವೆ. ಆದರೆ ಇವು ಯಾವುದೂ ರಾಜಕೀಯ ನಾಯಕರನ್ನು ವಿಚಲಿತಗೊಳಿಸುವುದಿಲ್ಲ. ಬಹುತೇಕ ನಾಯಕರು ಇಂತಹ ವರದಿಗಳನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಇದ್ದುದರಲ್ಲಿ ಸುಭಗನನ್ನು ಆರಿಸುವ ಅನಿವಾರ್ಯತೆ ಮತದಾರರ ಮುಂದೆ. ಆದರೆ ಜನರು ಇಚ್ಚಿಸಿದರೆ ಈ ಪರಿಸ್ಥಿತಿ ಬದಲಾಯಿಸಬಹುದು. ಇದಕ್ಕೆ ಬೇಕಿರುವುದು ಒಂದಷ್ಟು ದೃಢಸಂಕಲ್ಪ ಮತ್ತು ವಿವೇಚನಾ ಶಕ್ತಿ. ಜನರು ಜಾಗೃತರಾದರೆ ಯಾವ ಶಕ್ತಿಯೂ ತಡೆಯುವುದು ಅಸಾಧ್ಯ. ಅಂತಹ ಒಂದು ಜಾಗೃತಿ ತೋರಿಸಲು ಈ ಚುನಾವಣೆಯೇ ಮುನ್ನುಡಿಯಾಗಲಿ. 


ಇಂದು ಹೆಚ್ಚು ಓದಿದ್ದು

Trending videos

Back to Top