CONNECT WITH US  

ಉಚಿತ ವಿದ್ಯುತ್‌ ದಕ್ಕಿಸಿಕೊಳ್ಳೋದು ಕಷ್ಟ ಕಷ್ಟ

ವಿದ್ಯುತ್‌ ನಿಯಂತ್ರಣ ವ್ಯವಸ್ಥೆಗಳು ಸೋಲಾರ್‌ ವಿದ್ಯುತ್‌ ಖರೀದಿ ದರವನ್ನು ಗಣನೀಯವಾಗಿ ಕುಗ್ಗಿಸಿವೆ. ಕೆಲವು ರಾಜ್ಯಗಳಲ್ಲಿ ಯೂನಿಟ್‌ ಬೆಲೆ 7.8 ಇದ್ದದ್ದು 2.44ಕ್ಕೆ ಇಳಿದಿದೆ. ಕರ್ನಾಟಕದಲ್ಲಿಯೇ 9 ರೂ. ಇದ್ದದ್ದು ಈಗ 6 ರೂ.ಗೆ ಕುಸಿದಿದೆ. 

ಭಾರತದ ಭೌಗೋಳಿಕ ಪರಿಸ್ಥಿತಿಯನ್ನು ಅವಲೋಕಿಸಿರುವ ವಿಶ್ವಬ್ಯಾಂಕ್‌, ಈ ದೇಶದಲ್ಲಿ ಸೋಲಾರ್‌ ವಿದ್ಯುತ್‌ಅನ್ನು ಪರಮಾವಧಿ ಪ್ರಮಾಣದಲ್ಲಿ ಉತ್ಪತ್ತಿ ಮಾಡಿಕೊಳ್ಳುವ ಸಾಧ್ಯತೆ ಇದೆ. ವರ್ಷದ 300 ದಿನವಂತೂ ಆರಾಮವಾಗಿ ಗರಿಷ್ಠ ವಿದ್ಯುತ್‌ ಉತ್ಪಾದನೆ ಮಾಡಬಹುದು ಎಂದಿದೆ. ಇದೇ ವೇಳೆ ನ್ಯಾಷನಲ್‌ ಇನ್ಸಿಟ್ಯೂಟ್‌ ಆಫ್ ಸೋಲಾರ್‌ ಎನರ್ಜಿ ಸಂಸ್ಥೆ ದೇಶದಲ್ಲಿ ಪ್ರತಿ ವರ್ಷ ಸೋಲಾರ್‌ ಒಂದರಿಂದಲೇ 748.98ನ ಗಿಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆ ಸಾಧ್ಯ ಎಂದು ಅಂದಾಜಿಸಿದೆ. ಇತ್ತ, ದೇಶದ ಅಸಂಪ್ರದಾಯಿಕ ಇಂಧನಗಳ ಇಲಾಖೆಗಳ ರಾಜ್ಯ ಸಚಿವ ಪೀಯೂಷ್‌ ಗೋಯಲ್‌ ದೇಶದ ಗುರಿಯನ್ನು 2022ಕ್ಕೆ ಅನ್ವಯಿಸುವಂತೆ 100 ಗಿವ್ಯಾಟ್‌ಗೆ ನಿಗದಿಪಡಿಸಿದ್ದಾರೆ!

ವೃದ್ಧಿ ದರ ಶೇ. 123!: ಸೋಲಾರ್‌ ಕ್ಷೇತ್ರದಲ್ಲಿ ಅಚ್ಚರಿದಾಯಕ ಮಾದರಿಯ ಬೆಳವಣಿಗೆಗಳಾಗಿರುವುದು ನಿಜ. 2016ರಲ್ಲಿ 4.3 ಗಿವ್ಯಾಟ್‌ ಸೋಲಾರ್‌ ವಿದ್ಯುತ್‌ ಗ್ರಿಡ್‌ಗೆ ಸೇರ್ಪಡೆಯಾಗಿದ್ದರೆ 2017ರಲ್ಲಿ 9.6 ಗಿವ್ಯಾಟ್‌ ಉತ್ಪಾದನೆ ಹೆಚ್ಚಳವಾಗಿದೆ. ಆ ಲೆಕ್ಕದಲ್ಲಿ ಇದು ಶೇ. 123ರ ಅಭಿವೃದ್ಧಿ. ಇಂದು ಸೋಲಾರ್‌, ಪವನ ಮೊದಲಾದ ಅಸಂಪ್ರದಾಯಿಕ, ಪುನಶ್ಚೇತನಗೊಳಿಸಬಹುದಾದ ಇಂಧನ ಮೂಲಗಳಿಂದ ದೇಶದ ಶೇ. 32.2ರಷ್ಟು ವಿದ್ಯುತ್‌ ತಯಾರಾಗುತ್ತಿದೆ. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸ್ವಾವಲಂಬಿ ಭಾರತದ ಕನಸಿಗೆ ಇದು ಕಿರುಬೆರಳಿನಷ್ಟು ಕಾಣಿಕೆಯನ್ನು ಮಾತ್ರ ನೀಡಿದೆ.

ಕೇಂದ್ರದ ಆಶಯಕ್ಕೂ, ಈಚೆಗೆ ಕೈಗೊಳ್ಳುತ್ತಿರುವ ನಿರ್ಧಾರಗಳಿಗೂ ತಾಳಮೇಳ ಕಾಣುತ್ತಿಲ್ಲ. 2010ರಿಂದ ಸೋಲಾರ್‌ ವಿದ್ಯುತ್‌ ಉತ್ಪಾದನಾ ಕ್ಷೇತ್ರದ ಬೆಳವಣಿಗೆಗೆ ಯೋಜನೆಗಳನ್ನು ರೂಪಿಸಲಾಗಿದೆ. ಕೇಂದ್ರದ ಜವಾಹರ್‌ ಲಾಲ್‌ ನೆಹರು ನ್ಯಾಷನಲ್‌ ಸೋಲಾರ್‌ ಮಿಷನ್‌ ಅವುಗಳಲ್ಲೊಂದು. ಅದಕ್ಕಿಟ್ಟ ಹೆಸರಿನ ಬಗ್ಗೆ ನಿರ್ಲಕ್ಷ್ಯ ತೋರಿಸುವುದನ್ನು ಮನ್ನಿಸೋಣ. ಆದರೆ ಸರ್ಕಾರದ ಪ್ರೋತ್ಸಾಹ ನೋಡಿದರೆ ನಿರಾಶೆಯಾಗುತ್ತದೆ. ಸೋಲಾರ್‌ ಉಪಕರಣಗಳಿಗೆ ಈಗ ಜಿಎಸ್‌ಟಿ ಶಾಕ್‌ ತಟ್ಟಿದೆ. ಶೇ. 5ರಿಂದ 28ರವರೆಗೆ ಜಿಎಸ್‌ಟಿ ಹೇರಲಾಗಿದೆ. ಹಾಗಿದ್ದೂ ಈ ಕ್ಷೇತ್ರದ ಪ್ರಗತಿಯ ವೇಗ ಹೆಚ್ಚುತ್ತಿತ್ತೇನೋ. ವಿದ್ಯುತ್‌ ಪ್ರಸರಣ ವ್ಯವಸ್ಥೆಯ ಕಂಪನಿಗಳ ಕೆಂಪುಪಟ್ಟಿ, ಲಂಚಾವತಾರ ಜನರನ್ನು ಬೆಚ್ಚಿ ಬೀಳಿಸಿದೆ. ಹರಿಯಾಣದ ಹರೇದಾ, ಯುಪಿಯ ಉಪ್ನೇದಾ, ಕರ್ನಾಟಕದ ಎಸ್ಕಾಂಗಳ ಅಧಿಕಾರಿಗಳ ಲಂಚಗುಳಿತನ ಈ ಕ್ಷೇತ್ರಕ್ಕೆ ದೊಡ್ಡ ಧಕ್ಕೆ.

25 ವರ್ಷಗಳ ಒಪ್ಪಂದದ ನಖರಾ!: ಸೋಲಾರ್‌ ಸೆಲ್‌ಗ‌ಳ ಬೆಲೆಯ ಇಳಿಕೆ ಈ ಕ್ಷೇತ್ರವನ್ನು ಇನ್ನಿಲ್ಲದ ವೇಗದಲ್ಲಿ ಬೆಳೆಯುವಂತೆ ಮಾಡಬೇಕಿತ್ತು. ವಿದ್ಯುತ್‌ ನಿಯಂತ್ರಣ ವ್ಯವಸ್ಥೆಗಳು ಸೋಲಾರ್‌ ವಿದ್ಯುತ್‌ ಖರೀದಿ ದರವನ್ನು ಗಣನೀಯವಾಗಿ ಕುಗ್ಗಿಸಿವೆ. ಕೆಲವು ರಾಜ್ಯಗಳಲ್ಲಿ ಯೂನಿಟ್‌ ಬೆಲೆ 7.8 ಇದ್ದದ್ದು 2.44ಕ್ಕೆ ಇಳಿದಿದೆ. ಕರ್ನಾಟಕದಲ್ಲಿಯೇ 9 ರೂ. ಇದ್ದದ್ದು ಈಗ 6 ರೂ.ಗೆ ಕುಸಿದಿದೆ. ಹಲವೆಡೆ ಗ್ರಿಡ್‌ ಮಾರುವ ಬೆಲೆಗಿಂತ ಸೋಲಾರ್‌ ಯೂನಿಟ್‌ನ ಖರೀದಿ ಬೆಲೆ ಕಡಿಮೆಯಾಗಿದೆ. ಪ್ರಶ್ನೆ ಅದಲ್ಲ, ಕರ್ನಾಟಕದ ದೃಷ್ಟಾಂತ ತೆಗೆದುಕೊಳ್ಳುವುದಾದರೆ, ವಿದ್ಯುತ್‌ ಖರೀದಿ ಒಪ್ಪಂದ 25 ವರ್ಷಗಳ ಲೆಕ್ಕದಲ್ಲಿ ಆಗುತ್ತಿದೆ.

ಇವತ್ತಿಗೆ 6 ರೂ. ಕಡಿಮೆಯಾಗದಿರಬಹುದು. ಇನ್ನು 20 ವರ್ಷಗಳ ನಂತರವೂ ಇದೇ ದರದಲ್ಲಿ ಯೂನಿಟ್‌ ಮಾರಬೇಕು ಎಂಬುದು ಹಣದುಬ್ಬರ, ರೂಪಾಯಿ ಮೌಲ್ಯಗಳ ಪರಿಗಣನೆಯಲ್ಲಿ ಮಾಯಾಗುತ್ತದೆ. 25 ವರ್ಷಗಳ ಒಪ್ಪಂದದಲ್ಲಿ ಬೆಲೆ ನಿಷ್ಕರ್ಷೆಯಲ್ಲಿ ವರ್ಷಗಳ ಸ್ಲಾಬ್‌ ನಿರ್ಧರಿಸಿ ಯೂನಿಟ್‌ ದರವನ್ನು ಅಂದಾಜಿಸುವುದು ಹೆಚ್ಚು ತಾರ್ಕಿಕ ಎನ್ನಿಸಿಕೊಳ್ಳುತ್ತಿತ್ತು. ಒಂದಂತೂ ನಿಜ, ದೇಶದಲ್ಲಿ ಸೋಲಾರ್‌ ವಿದ್ಯುತ್‌ ಬೃಹತ್‌ ಪ್ರಮಾಣದಲ್ಲಿ ಉತ್ಪಾದನೆಯಾಗಿ ಗ್ರಾಹಕನ ವಿದ್ಯುತ್‌ ಬಳಕೆ ದರ ಕುಸಿಯುತ್ತದೆ ಎಂಬ ನಂಬಿಕೆ ವಾಸ್ತವವಾಗುವುದು ಕಷ್ಟ. ಪೆಟ್ರೋಲ್‌ನ ವಿಚಾರದಲ್ಲಿಯೇ ನಾವು ಈ ವಿದ್ಯಮಾನವನ್ನು ಗಮನಿಸಿದ್ದೇವೆ.

ನೆಟ್‌ ಮೀಟರಿಂಗ್‌ ಸೌಲಭ್ಯ: ಇದ್ದುದರಲ್ಲಿ ವಿದ್ಯುತ್‌ ಸರಬರಾಜು ಕಂಪನಿಗಳು ಸೋಲಾರ್‌ ವಿದ್ಯುತ್‌ ಖರೀದಿಯಲ್ಲಿ ನೆಟ್‌ ಮೀಟರಿಂಗ್‌ ತಂತ್ರಜಾnನ, ಸೂತ್ರವನ್ನು ಬಳಸುತ್ತಿವೆ. ಒಂದು ಸ್ಥಾವರದಲ್ಲಿ ಉತ್ಪಾದನೆಯಾಗುವ ವಿದ್ಯುತ್‌,ಯೂನಿಟ್‌ ನೆಟ್‌ ಮೀಟರಿಂಗ್‌ ವ್ಯವಸ್ಥೆಯ ಮೂಲಕ ಗ್ರಿಡ್‌ ಹಾಗೂ ಗ್ರಾಹಕನ ಬಳಕೆಯೆಡೆ ಹರಿಯುತ್ತದೆ. ಉತ್ಪಾದನೆಯಾದ ಯೂನಿಟ್‌ಗಳ ಮೊತ್ತದಲ್ಲಿ ಗ್ರಾಹಕ ಬಳಸಿದ ಯೂನಿಟ್‌ನ್ನು ಕಳೆದು ಉಳಿದುದಕ್ಕೆ ಒಪ್ಪಂದದ ದರದಂತೆ ಹಣ ಪಾವತಿಸುತ್ತದೆ.

ಹೀಗೆ ಯೋಚಿಸಿ, ಸೋಲಾರ್‌ ವಿದ್ಯುತ್‌ ವಿದ್ಯುತ್‌ನ ಬಲು ಬೇಡಿಕೆಯ ಪೀಕ್‌ ಅವಧಿಯಲ್ಲಿ ಉತ್ಪತ್ತಿಯಾಗುವುದಿಲ್ಲ. ತಮ್ಮ ಉತ್ಪಾದನೆ ಇಲ್ಲದಿದ್ದರೂ ಮನೆ, ಉದ್ಯಮಗಳು ಬಲು ಬೇಡಿಕೆಯ ಸಂಜೆ, ಬೆಳಗಿನ ಅವಧಿಯಲ್ಲಿ ಗ್ರಿಡ್‌ನಿಂದ ಹೆಚ್ಚು ವಿದ್ಯುತ್‌ ಬಳಸುತ್ತವೆ. ನೆಟ್‌ ಮೀಟರಿಂಗ್‌ನಲ್ಲಿ ಇದನ್ನು ಪ್ರತ್ಯೇಕಗೊಳಿಸಿ ಈ ಅವಧಿಯ ಯೂನಿಟ್‌ಗೆ ಪ್ರತ್ಯೇಕ ದರವನ್ನೇನು ಹೇರುವುದಿಲ್ಲ. ಇಂತಹ ಸಾಧ್ಯತೆಯಂತೂ ಇದೆ. ಈಗಾಗಲೇ ಹರಿಯಾಣ, ಉತ್ತರ ಪ್ರದೇಶಗಳಲ್ಲಿ ನೆಟ್‌ ಮೀಟರಿಂಗ್‌ಗೆ ಒಂದು ಮೆಗಾವ್ಯಾಟ್‌ ಮಾತ್ರ ಅನ್ವಯಿಸುತ್ತದೆ. 

ಕೊನೆ ಮಾತು: ದೇಶದ ಪರಿಸರವಾದಿಗಳು ನೀರು, ಅಣು, ಕಲ್ಲಿದ್ದಲು ಆಧಾರಿತ ವಿದ್ಯುತ್‌ ಉತ್ಪಾದನೆಯ ಯೋಜನೆಗಳನ್ನು ವಿರೋಧಿಸುತ್ತಾರೆ. ಅದು ಸರಿ. ವಿದ್ಯುತ್‌ ಇಲ್ಲದೆ ಅವರಿಗೂ ಬದುಕಲು ಆಗದ ಈ ದಿನವೊಪ್ಪತ್ತಿನಲ್ಲಿ ಅವರು ಸೋಲಾರ್‌ ವಿದ್ಯುತ್‌ ಉತ್ಪಾದನೆಯ ಹೆಚ್ಚಳಕ್ಕೆ ಆಂದೋಲನ ರೂಪಿಸುವ ಮೂಲಕ, ಇಂತಹ ಸಣ್ಣ ಸಣ್ಣ ಉತ್ಪಾದಕರಿಗೆ ಸಿಗುವ ಸಬ್ಸಿಡಿಗಳನ್ನು ದೊರಕಿಸಿಕೊಡಲು ಸಹಾಯ ಒದಗಿಸುವ ಮೂಲಕ ಮತ್ತು ಸೋಲರ್‌ ವಿದ್ಯುತ್‌ ಜನರೇಶನ್‌ಅನ್ನು ಪ್ರಭಾವಿಸುವ ಸರ್ಕಾರದ ನೀತಿ ನಿರ್ಧಾರಗಳನ್ನು ಬದಲಿಸುವಂತೆ ಒತ್ತಡ ಹೇರುವ ಮುಖಾಂತರ‌ ತಮ್ಮ ಚಟುವಟಿಕೆ ನಡೆಸಿದ್ದರೆ ಭೇಷಿತ್ತು! 

* ಗುರು ಸಾಗರ


ಇಂದು ಹೆಚ್ಚು ಓದಿದ್ದು

Trending videos

Back to Top