CONNECT WITH US  

ರಿಯಲ್‌ ಎಸ್ಟೇಟೂ.. ಬ್ಲಾಕ್‌ ಅಂಡ್‌ ವೈಟೂ

ಹೂಡಿಕೆ ಮಾಡಲು ದಾರಿಗಳು ಕಾಣುತ್ತಿಲ್ಲ. ಷೇರು ಮಾರುಕಟ್ಟೆಯ ಲೆಕ್ಕಾಚಾರ ಅರ್ಥವಾಗದು, ಚಿನ್ನದ ಮೇಲಿನ  ಹೂಡಿಕೆ ನಂಬುವಂತಿಲ್ಲ, ಸೈಟು, ಮನೆಗಳೆಲ್ಲಾ ಕುಂಭಕರ್ಣನಂತೆ ನಿದ್ದೆ ಮಾಡುತ್ತಿವೆ. ಹಾಗಾದರೆ, ಉಳಿತಾಯಕ್ಕೆ ಆರ್‌ಡಿ, ಎಫ್ಡಿನೇ ಬೆಸ್ಟಾ ಅಂಥ ಯೋಚಿಸುವ ಹೊತ್ತಿಗೆ ರಿಯಲ್‌ ಎಸ್ಟೇಟ್‌ ಮತ್ತೆ ಚಿಗುರುವ ಸೂಚನೆ ಕೊಟ್ಟಿದೆ. ಹಾಗಾದರೇ ಇನ್ನು ಮುಂದೆ ಅಪಾರ್ಟಮೆಂಟ್‌, ಸೈಟಿನ ಮೇಲೆ ದುಡ್ಡು ಹಾಕಬಹುದೇ? ಇಲ್ಲಿದೆ ಮಾಹಿತಿ. 

ಹೂಡಿಕೆ ಮಾಡಲು ಕೈಯಲ್ಲಿ ದುಡ್ಡು ಹಿಡಿದವರಿಗೆ ಕಣ್ಣಮುಂದೆ ಕಾಣೋದು ಈ ಮೂರು. 1) ಷೇರು/ ಎಫ್ಡಿ 2) ರಿಯಲ್‌ ಎಸ್ಟೇಟ್‌3) ಚಿನ್ನ ಈ ಹಿಂದೆ, ಯಾರು ಹಿತವರು ಈ ಮೂವರೊಳಗೆ ಅನ್ನೋದನ್ನ ತೀರ್ಮಾನ ಮಾಡಬೇಕಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಈ ತನಕ ಚಿನ್ನ, ರಿಯಲ್‌ಎಸ್ಟೇಟಿಗೆ ದುಡ್ಡು ಹಾಕುತ್ತಿದ್ದವರು ಈಗ ಸ್ವಲ್ಪ ಯೋಚನೆ ಮಾಡುವಂತಾಗಿದೆ. ಏಕೆಂದರೆ ಕಳೆದ ಎರಡು ಮೂರು ವರ್ಷಗಳಿಂದ ಚಿನ್ನ ಮೇಲಿನ ಹೂಡಿಕೆ ಅಷ್ಟೇನು ಲಾಭದಾಯಕವಾಗಿಲ್ಲ.

ವರ್ಷಕ್ಕೆ ಶೇ. 5 ರಷ್ಟು ಏರುವುದೂ ಅನುಮಾನ. ಕಳೆದ ಎರಡು ತಿಂಗಳ ಹಿಂದೆ ಶೇ 1.9, .59ರಷ್ಟು ಏರಿಕೆಯಾಗಿದೆ. ಈ ಷೇರಿಗೂ ಚಿನ್ನಕ್ಕೂ ಅಂಥ ವ್ಯತ್ಯಾಸವೇನೂ ಕಾಣುತ್ತಿಲ್ಲವಾದರೂ, ಚಿನ್ನಕ್ಕೆ ಹೋಲಿಸಿದರೆ ಷೇರು ಹೆಚ್ಚು ಲಾಭ ತಂದುಕೊಡುತ್ತಿರುವುದೇನು ಸುಳ್ಳಲ್ಲ. ಅಲ್ಲದೇ, ಸಣ್ಣಪುಟ್ಟ ಚಿನ್ನದ ಅಂಗಡಿಗಳಲ್ಲಿ ನೇರವಾಗಿ ಕೊಂಡುಕೊಳ್ಳುತ್ತಿದ್ದ ಚಿನ್ನದ ವ್ಯವಹಾರ ಕೂಡ ಮಂಕು, ಮಂಕಾಗಿದೆ. ತೆರಿಗೆಯ ಬರೆ ಬಿದ್ದಿರುವುದರಿಂದ ಮಧ್ಯಮವರ್ಗ ಚಿನ್ನವನ್ನೂ ನಂಬುತ್ತಿಲ್ಲ. ಈಗೇನಿದ್ದರೂ ಮದುವೆ, ಮುಂಜಿಯಂಥ ಶುಭ ಸಮಾರಂಭಗಳಿಗೆ ಮಾತ್ರ ಚಿನ್ನ ಕೊಳ್ಳುವ ಸಂಪ್ರದಾಯ ಉಳಿದಿದೆ. 

ಇನ್ನು ರಿಯಲ್‌ಎಸ್ಟೇಟ್‌ನಲ್ಲಿ ಕಳೆದ ಎರಡು ವರ್ಷದ ಹಿಂದೆ ಇದ್ದ ಭೂಮ್‌ ಈಗ ಇಲ್ಲ. ಸೈಟು, ಮನೆ, ಜಮೀನಿನ ಮೇಲಿನ ಹೂಡಿಕೆ ತಣ್ಣಗೆ ಮಲಗಿ ಬಿಟ್ಟಿದೆ. ಕಳೆದ 6 ತಿಂಗಳ ಲೆಕ್ಕ ನೋಡಿದರೆ ಹೂಡಿಕೆ ಗ್ರೌತ್‌ ಶೇ. 5-10ರಷ್ಟಕ್ಕೆ ಇಳಿದು ಬಿಟ್ಟಿದೆ. ಬೇಡಿಕೆ 60ರಷ್ಟು ಕುಗ್ಗಿದೆ. ವಹಿವಾಟುಗಳು ಶೇ. 30, 40ರಷ್ಟಕ್ಕೆ ಬಿದ್ದು ಹೋಗಿದೆ ಎನ್ನುವ ತಜ್ಞರ ಅಭಿಪ್ರಾಯವನ್ನು ತಳ್ಳಿಹಾಕುವಂತಿಲ್ಲ. ಇದನ್ನು ನೋಡಿದ ಬ್ಯಾಂಕ್‌ಗಳು, ಗೃಹಸಾಲ ಕೊಡಲು ಮುಂದಾದರೂ ಅದು ಕೆಳ ಮಧ್ಯಮವರ್ಗವನ್ನು ಮಾತ್ರ ಆಕರ್ಷಿಸಿದೆ.

ಮೇಲ್ವರ್ಗದ ಗಾತ್ರ ರಿಯಲ್‌ಎಸ್ಟೇಟ್‌ ಹೂಡಿಕೆಯಲ್ಲಿ ಶೇ. 10ರಷ್ಟು ಇದ್ದರೂ, ಅವರೇ ಪ್ರಮುಖ ಪಾತ್ರವಹಿಸುವುದು. ನೋಟ್‌ಬ್ಯಾನ್‌ ನಂತರ ಈ ವರ್ಗ ರಿಯಲ್‌ ಎಸ್ಟೇಟ್‌ ಕಡೆ ತಲೆ ಕೂಡ ಹಾಕಿ ಮಲಗುತ್ತಿಲ್ಲವಾದ್ದರಿಂದ ಮಂಕು ಬಡಿಯಲು ಇವರೂ ಕಾರಣ.ಹೀಗಾಗಿ ಆಸ್ತಿಗಳ ಬೆಲೆಗಳು ಗಗನದಲ್ಲೇ ಇದ್ದರೂ, ಕೊಂಡುಕೊಳ್ಳುವವರು ಅದರ ಪಾದದಲ್ಲಿದ್ದಾರೆ. " ಸಣ್ಣಪುಟ್ಟ ಅಪಾರ್ಟ್‌ಮೆಂಟ್‌ಗಳ ಅಪ್ರಿಸಿಯೇಷನ್‌ ಆಗುತ್ತಿಲ್ಲ. ಕಾರಣ, ಗುಣಮಟ್ಟ ಕಳಪೆ. ವಿಲ್ಲಾಗಳು, ಐಷಾರಾಮಿ ಅಪಾರ್ಟ್‌ಮೆಂಟ್‌ಗಳಿಗೆ ಇದ್ದ ಬೇಡಿಕೆ ತೀರಾ ಬಿದ್ದಿಲ್ಲ.

ಗುಣಮಟ್ಟ ಚೆನ್ನಾಗಿರುವುದರಿಂದ ರೀಸೇಲ್‌ ಕೂಡ ಚೆನ್ನಾಗಿದೆ. ಈಗೀಗ ರಿಯಲ್‌ ಎಸ್ಟೇಟ್‌ ಪಿಕಪ್‌ ಆಗುತ್ತಿದೆ' ಎನ್ನುತ್ತಾರೆ ಲಾಯರ್‌ ಲೇಖರಾಜ್‌. ನಮ್ಮಲ್ಲಿ ಕಪ್ಪು ಹಣ ಹರಿಯುತ್ತಿದ್ದದ್ದು ಈ ರಿಯಲ್‌ಎಸ್ಟೇಟಿನ ಕಡೆಗೆ.  ನೋಟ್‌ಬ್ಯಾನ್‌ನ ನೇರ ಏಟು ಬಿದ್ದಿರುವುದು ಈ ಕ್ಷೇತ್ರಕ್ಕೆ. ಆದ್ದರಿಂದ ಸೈಟಿನ ಮೇಲಾಗಲಿ, ಅಪಾರ್ಟ್‌ಮೆಂಟ್‌ ಮೇಲಾಗಲಿ ಹೂಡಿ, ಹಣ ಮಾಡುವವರ ಸಂಖ್ಯೆ ಇಳಿದೇ ಹೋಗಿದೆ. ದುರಂತ ಎಂದರೆ, ಒಂದು ವರ್ಷದ ಹಿಂದೆ ರಾಜ್ಯದ ಎಲ್ಲಾ ಆಸ್ತಿಗಳ ಸರ್ಕಾರಿ ಬೆಲೆಯನ್ನು (ಗೈಡೆನ್ಸ್‌ ವ್ಯಾಲ್ಯು) ಶೇ. 40ರಿಂದ 400 ಪಟ್ಟು ಅಂದರೆ ಮಾರುಕಟ್ಟೆ ಬೆಲೆಗೆ ಹೊಂದುವಂತೆ ಸರ್ಕಾರ ಏರಿಸಿದೆ. ಹೀಗಾಗಿ ಮಾರುಕಟ್ಟೆ ಬೆಲೆ, ಗೈಡೆನ್ಸ್‌ ವ್ಯಾಲ್ಯು ನಡುವಿನ ಅಂತರ ಶೇ.20-30ರಷ್ಟು ಮಾತ್ರ ಉಳಿದಿದೆ. 

ಅಪಾರ್ಟ್‌ಮೆಂಟ್‌ಗೆ ಬೆಲೆ ಇಲ್ಲ: ಬೆಂಗಳೂರು ಒಂದರಲ್ಲೇ ಎರಡು ಲಕ್ಷ ಅಪಾರ್ಟ್‌ಮೆಂಟ್‌ಗಳು ಕಾಲಿ ಇವೆ ಅನ್ನೋ ಮಾತು ಇದೆ.  ಇದಕ್ಕೆ ಕಾರಣ ರೀಸೇಲ್‌(ಮರುಮಾರಾಟ) ವ್ಯಾಲ್ಯು ತಳ ಮುಟ್ಟಿರುವುದು. ಈ ಮೊದಲು ಕೂಡಿಟ್ಟ ಹಣವನ್ನು ಅಪಾರ್ಟ್‌ಮೆಂಟ್‌ಗಳ ಮೇಲೆ ಹಾಕಿ, ಅದನ್ನು ಬಾಡಿಗೆಗೆ ಕೊಟ್ಟು ಆದಾಯ ಮಾಡಿಕೊಳ್ಳುತ್ತಿದ್ದ ಮಂದಿ ಈಗ ತೆರಿಗೆ ಬಲೆಗೆ ಬಿದ್ದಿದ್ದಾರೆ. ಅದೇ ರೀತಿ, ಅಪಾರ್ಟ್‌ಮೆಂಟ್‌ ಮೇಲೆ ಹೂಡಿಕೆ ಮಾಡಿ,  ಬೆಲೆ ಹೆಚ್ಚಾದಾಗ ಅದನ್ನು ಮಾರಿ ಲಾಭ ಮಾರಿಕೊಳ್ಳುತ್ತಿದ್ದ ಇನ್ನೊಂದು ವರ್ಗಕ್ಕೂ ತೆರಿಗೆ ಬಿಸಿತುಪ್ಪವಾಗಿದೆ. ಎಲ್ಲದಕ್ಕೂ ಕಾರಣ ವೈಟ್‌ಅಂಡ್‌ ಬ್ಲಾಕ್‌ ನೀತಿ.

ಈ ಹಿಂದೆ, ಒಂದು ಆಸ್ತಿಯ ಸರ್ಕಾರಿ ನಿರ್ದೇಶಿತ ಬೆಲೆಯನ್ನು ಬಿಳಿ ಹಣದಲ್ಲಿ, ಉಳಿದ ಮಾರುಕಟ್ಟೆಯ ಬೆಲೆ ವ್ಯತ್ಯಾಸವನ್ನು ಕಪ್ಪುಹಣದಲ್ಲಿ ಸರಿ ಹೊಂದಿಸುತ್ತಿದ್ದರು. ಉದಾಹರಣೆಗೆ- ಅಪಾರ್ಟ್‌ಮೆಂಟ್‌ನ ಮಾರುಕಟ್ಟೆ ಬೆಲೆ 50ಲಕ್ಷ ಇದ್ದರೆ. ಸರ್ಕಾರಿ ನಿರ್ದೇಶಿತ ಬೆಲೆ 30 ಲಕ್ಷ ಇರುತ್ತಿತ್ತು. ಕೊಳ್ಳುವವರು 30 ಲಕ್ಷವನ್ನು ಬಿಳಿಹಣದಲ್ಲಿಯೂ, ಉಳಿಕೆ 20 ಲಕ್ಷವನ್ನು ಕಪ್ಪುಹಣ (ಲೆಕ್ಕವಿಲ್ಲದ ಕ್ಯಾಷ್‌)ವಾಗಿ ಕೊಟ್ಟು ಸರಿದೂಗಿಸಿಕೊಳ್ಳುತ್ತಿದ್ದರು. ಆದರೆ ಹೊಸ ನಿಯಮದ ಪ್ರಕಾರ, ಯಾರೇ ಆಸ್ತಿಯನ್ನು ಕೊಳ್ಳಬೇಕಾದರೆ ಆ ವ್ಯವಹಾರ ಸಂಪೂರ್ಣವಾಗಿ ಬಿಳಿಹಣದಲ್ಲೇ ಆಗಬೇಕು. ಸರ್ಕಾರಿ ನಿರ್ದೇಶಿತ ಬೆಲೆಗೆ ತೆರಿಗೆ ಕಟ್ಟಿದರೂ, ಆ ಆದಾಯದ ಮೂಲವನ್ನು ತೋರಿಸಬೇಕಾಗುತ್ತದೆ. ಒಂದು ಪಕ್ಷ ಕಪ್ಪುಹಣವಾಗಿ ಪಡೆದು, ಅದನ್ನು ಬ್ಯಾಂಕಿನಲ್ಲಿ ಹಾಕಿದರೆ ಅದಕ್ಕೂ ಲೆಕ್ಕ ಕೊಡಬೇಕಾಗುತ್ತದೆ.  

ಪ್ರತಿ ಸಬ್‌ರಿಜಿಸ್ಟ್ರಾರ್‌ ಕಚೇರಿಯಲ್ಲಿ 10ಲಕ್ಷಕ್ಕಿಂತ ಹೆಚ್ಚು ವ್ಯವಹಾರ ನಡೆಸಿದರೆ, ಆ ವ್ಯಕ್ತಿಯ ಮಾಹಿತಿ ತೆರಿಗೆ ಇಲಾಖೆಗೆ ರವಾನೆಯಾಗುತ್ತದೆ. ಹಾಗೆಯೇ, ಬ್ಯಾಂಕ್‌ನಲ್ಲೂ ಕೂಡ ಲಕ್ಷ  ಲಕ್ಷ ವ್ಯವಹಾರ ನಡೆಸಿದರೆ, ಆ ಆದಾಯದ ಮೂಲ ಯಾವುದು ಅನ್ನೋದನ್ನು ತಿಳಿಸಬೇಕಾಗುತ್ತದೆ. ಒಂದು ಪಕ್ಷ ನೀವು ಬ್ಯುಸಿನೆಸ್‌ ಮಾಡುತ್ತಿದ್ದು, ರಿಟರ್ನ್ ಫೈನಲ್‌ ಮಾಡಿ, ಅದರಲ್ಲಿ ಉಳಿಸಿದ ಹಣದಲ್ಲಿ ಆಸ್ತಿಯನ್ನು ಕೊಂಡು ಕೊಳ್ಳುವಂತಿದ್ದರೆ ಯಾವ ಸಮಸ್ಯೆಯೂ ಎದುರಾಗುವುದಿಲ್ಲ. ಆದರೆ ನಮ್ಮಲ್ಲಿ ಈ ರೀತಿ ಹೂಡಿಕೆ ಮಾಡುವ ಮಂದಿ ಶೇ. 5-10ರಷ್ಟು ಮಾತ್ರ ಇದ್ದಾರೆ. ಆದರೆ ಮಾರುಕಟ್ಟೆಯನ್ನು ಡ್ರೈವ್‌ ಮಾಡುವವರು ಈ ವರ್ಗ.  ಹೀಗಾಗಿ ಹೂಡಿಕೆ ಮಾಡಿ ಪ್ರತಿವರ್ಷ ಶೇ.30-40ರಷ್ಟು, ಕೆಲವೊಮ್ಮೆ ಶೇ. 100, 200ರಷ್ಟು ಏರಿಕೆಯಾಗಿ ಕೈ ತುಂಬ ಆದಾಯ ತಂದುಕೊಡುತ್ತಿದ್ದ ಆಪಾರ್ಟ್‌ಮೆಂಟ್‌ ಹೂಡಿಕೆ, ಇಂದು ನೆಲ ಕಚ್ಚಿದೆ. 

ಹಾಗಾದರೆ ಯಾರು ಹೂಡಿಕೆ ಮಾಡುತ್ತಿದ್ದಾರೆ?: ಅಪಾರ್ಟ್‌ಮೆಂಟ್‌ ವಿಚಾರವಾಗಿ ಮೊದಲಿದ್ದ ಮೋಹ, ಅನಿವಾರ್ಯತೆ ಯಾವುದೂ ಈಗ ಇಲ್ಲ. ನಗರದ ಹೊರವಲಯದಲ್ಲಿ ನಿರ್ಮಾಣವಾಗುತ್ತಿದ್ದ ಅಪಾರ್ಟ್‌ಮೆಂಟ್‌ಗಳ ಬೆಲೆ ಶೇ. 20ರಿಂದ 35ರಷ್ಟು ಕುಸಿದಿದೆ. ಅಲ್ಲದೇ, ಬೇಡಿಕೆ ಕೂಡ ಶೇ. 70ರಷ್ಟು ಕೆಳಗೆ ಬಿದ್ದಿದೆಯಂತೆ. ಅಂದರೆ, ಆರ್‌ಡಿ, ಷೇರು, ಚಿನ್ನ ಅಂತ ಹೂಡಿಕೆ ಮಾಡುತ್ತಿದ್ದವರೆಲ್ಲಾ ಈಗ ಅಪಾರ್ಟ್‌ಮೆಂಟ್‌ಗಳ ಕಡೆ ಮುಖ ಮಾಡುತ್ತಿಲ್ಲ ಎನ್ನುವುದು ಖಚಿತವಾಗಿದೆ.

ಆದರೆ, ಹಳೇ ಪ್ರದೇಶಗಳಲ್ಲಿ-ಅಂದರೆ, ಬೆಂಗಳೂರಿನ ಜಯನಗರ, ಗಾಂಧಿಬಜಾರ್‌, ಮಂಗಳೂರಿನ ಸುರತ್ಕಲ್‌, ಪೊಂಪೆಲ್‌, ಜ್ಯೋತಿ, ಮೈಸೂರಿನ ಶ್ರೀರಾಂಪುರ, ಕನ್ನಗೌಡನ ಕೊಪ್ಪಲು  ಇಂಥ ಕಡೆಗಳಲ್ಲಿ ನಿರ್ಮಾಣವಾಗುವ ಅಪಾರ್ಟ್‌ಮೆಂಟ್‌ಗಳಿಗೆ ಬೇಡಿಕೆಯಲ್ಲಿ ತೀರ ವ್ಯತ್ಯಾಸವಾಗಿಲ್ಲ.  ಲಾಭದ ಏರಿಕೆ, ಮರುಮಾರಾಟದಲ್ಲೂ ಹಳೇ ಪ್ರದೇಶಗಳು ಹಿಂದೆ ಬಿದ್ದಿಲ್ಲವಾದ್ದರಿಂದ ಹೂಡಿಕೆದಾರರು ಆ ಪ್ರದೇಶಗಲ್ಲಿ ಹಣ ಹೂಡಲು ಸದಾ ಹಾತೊರೆಯುತ್ತಿದ್ದಾರೆ. 

ಇಂಥ ಪ್ರದೇಶದಲ್ಲಿ ಹೂಡಿಕೆ ಮಾಡುವವರು ಕೂಡ ಮೇಲ್ಪರ್ಗ, ಮೇಲ್‌ ಮಧ್ಯಮವರ್ಗದವರೇ.  ಇವರಲ್ಲಿ ಬಹುತೇಕರು ನಗರ ಪ್ರದೇಶದಲ್ಲಿರುವ ಆಸ್ತಿಗಳನ್ನು ಮಾರಿ ಹೊರವಲಯದಲ್ಲಿ ಹೂಡಿಕೆ ಮಾಡುತ್ತಿದ್ದವರು. ನೋಟ್‌ಬ್ಯಾನ್‌ ನಂತರ ಇವರ ಹೂಡಿಕೆಯ ಆಯ್ಕೆ ಕೂಡ ಬದಲಾಗಿ ಹೋಗಿದೆ. ಹೀಗಾಗಿ, ಯಾರಿಗೆ ಮನೆ, ಅಪಾರ್ಟ್‌ಮೆಂಟ್‌ ಅನಿವಾರ್ಯವಿದೆಯೋ ಅಂಥವರು ಮಾತ್ರ ಹೂಡಿಕೆ ಮಾಡಲು ಮುಂದೆ ಬರುತ್ತಿದ್ದಾರೆ. ಅದರಲ್ಲೂ, ಪ್ರತಿ ತಿಂಗಳೂ ಬಾಡಿಗೆ ಕಟ್ಟುವವರಿಗೆ ಬ್ಯಾಂಕ್‌ಗಳು ಕೊಡುತ್ತಿರುವ ಆಕರ್ಷಣೀಯ ಸಾಲ ಹಾಗೂ ಕೇಂದ್ರ ಸರ್ಕಾರದ ಮೊದಲಸಲ ಮನೆ ಕಟ್ಟುವವರಿಗೆ ಸಿಗುವ ವಿಶೇಷ ವಿನಾಯ್ತಿ ಕೂಡ ಇವರ ಕೊಳ್ಳುವ ಆಸಕ್ತಿ ಹೆಚ್ಚಿಸಿದೆ. ಹೀಗಾಗಿ ಮಾರುಕಟ್ಟೆ ಮತ್ತೆ ಜೀವ ಪಡೆದುಕೊಳ್ಳುತ್ತಿದೆ.  

ಇವೆಲ್ಲಾ ಗೊತ್ತಿರಲಿ 
ಅಪಾರ್ಟ್‌ಮೆಂಟ್‌ ಕೊಳ್ಳುವವರು ಬಿಲ್ಡರ್‌ರೇರಾದಲ್ಲಿ ನೋಂದಣಿ ಆಗಿದ್ದಾರೆಯೇ ಗಮನಿಸಿ. ಆಗಿದ್ದರೆ ನಂಬರ್‌ ಕೊಟ್ಟಿರುತ್ತಾರೆ. ಅದನ್ನು ಪರಿಶೀಲಿಸಿ. 
- 30 ವರ್ಷಗಳ ಅಪಾರ್ಟ್‌ಮೆಂಟ್‌ನ ದಾಖಲೆ ಪರಿಶೀಲಿಸಿ.  
- ನೋಂದಣಿ ಶುಲ್ಕ ಶೇ.5ರಷ್ಟು, ಸ್ಟಾಂಪ್‌ ಡ್ನೂಟಿ ಶೇ. 1ರಷ್ಟು,  ಶೇ..5ರಷ್ಟು ತೆರಿಗೆ ಇವಿಷ್ಟನ್ನೂ ತಪ್ಪದೇ ಸರ್ಕಾರಕ್ಕೆ ಕಟ್ಟಬೇಕು. 
 -ಮಾರುವವರು 50 ಲಕ್ಷಕ್ಕೆ ಮೇಲ್ಪಟ್ಟ ವಹಿವಾಟು ನಡೆಸಿದರೂ ಅದಕ್ಕೆ ಶೇ.1ರಷ್ಟು ಟಿಡಿಎಸ್‌ ಕಟ್ಟಬೇಕು.
- ಅಪಾರ್ಟ್‌ಮೆಂಟ್‌ಗಳಲ್ಲಿ ಕಾರು ಪಾರ್ಕಿಂಗ್‌ಗೆ ಒಂದು ಲಕ್ಷದ ಇಪ್ಪತ್ತು ಸಾವಿರ ಹೆಚ್ಚಿಗೆ ಕಟ್ಟಬೇಕು. ಎರಡು ಕಾರಿದ್ದರೆ ಇದರ ಎರಡರಷ್ಟಾಗುತ್ತದೆ. 
- ಏಳನೇ ಫ್ಲೋರ್‌ ದಾಟಿದರೆ ಅದಕ್ಕೆ ಹೆಚ್ಚುವರಿ ನೋಂದಣಿ ಶುಲ್ಕ, ಸ್ಯಾಂಪ್‌ ಡ್ನೂಟಿ ಕಟ್ಟಬೇಕು. 
- ನೀವು ಮಾರಾಟ ಮಾಡಿ ಬಂದ ಹಣವನ್ನು ಒಂದು ವರ್ಷದಲ್ಲಿ ಬೇರೆ ಆಸ್ತಿಯ ಮೇಲೆ ಹೂಡಬೇಕು. ಇಲ್ಲವಾದರೆ ಕ್ಯಾಪಿಟಲ್‌ ಗೇನ್ಸ್‌ ತೆರಿಗೆ ಕಟ್ಟಬೇಕು. ಅದು ಶೇ.30ರಷ್ಟು ಇರುತ್ತದೆ. 
      
ನಾನಾ ಮುಖ: ಹೂಡಿಕೆಗೆ ನಾನಾ ಮುಖಗಳಿವೆ. ಮಧ್ಯಮ ಕೆಳವರ್ಗ ಪ್ರತಿ ತಿಂಗಳು ದುಡ್ಡನ್ನು ಕೂಡಿಟ್ಟು, ಎತ್ತಿಟ್ಟು ಕೊನೆಗೆ ಎಲ್ಲಾ ಬಳಿದು ದೊಡ್ಡ ಮೊತ್ತ ಮಾಡಿ ಹೂಡಿಕೆ ಮಾಡುವುದು.  ಇವರು ಇಡುಗಂಟನ್ನು ಮಾಡಲು ಸರ್ಕಸ್ಸು ಮಾಡುತ್ತಾರೆ. ಅಂದರೆ ಮತ್ತೆ ಇನ್ನೊಂದು ಕಡೆ ಹೂಡಿಕೆ ಮಾಡಿ ದುಡ್ಡು ದೊಡ್ಡದು ಮಾಡುವುದಕ್ಕೂ ಮುಂದಾಗುತ್ತಾರೆ. ಉದಾಹರಣೆಗೆ- ಪ್ರತಿ ತಿಂಗಳು ಚಿನ್ನದ ಚೀಟಿ ಹಾಕಿ. ಕೊನೆಗೆ ಚಿನ್ನಕೊಳ್ಳುವುದು. ಇದೂ ಕೂಡ ಇನ್ನೊಂದು ಮಾರ್ಗ. ದೊಡ್ಡ ಮೊತ್ತದ ಹೂಡಿಕೆ ಮಾಡಬೇಕಾದರೆ ಚಿನ್ನವನ್ನು ಮಾರಿ ಹೂಡಿಕೆ ಮಾಡುವುದು. 

 ಇನ್ನೊಂದು ವರ್ಗವಿದೆ. ಅವರದು ಹೇಗೆಂದರೆ, ದುಡ್ಡು ಹಿಡಿದು ಒಂದೇ ಸಾರಿ ಹೂಡಿಕೆ ಮಾಡುತ್ತಾರೆ. ಇವರು ಈ ಹಿಂದೆ ಎಲ್ಲೋ ಹೂಡಿಕೆ ಮಾಡಿ, ಅದರಿಂದ ಬಂದ ಲಾಭದಲ್ಲಿ ಶೇಕಡಾವಾರು ಎತ್ತಿಟ್ಟು ಇನ್ನೊಂದು ವ್ಯವಹಾರದಲ್ಲಿ ಹೂಡಿಕೆ ಮಾಡುವುದು. ಈ ರೀತಿ ದುಡ್ಡು ಹಾಕುವವರು ಶೇ. 5ರಷ್ಟು.   
   ಮಧ್ಯಮವರ್ಗವಾದರೆ ಮಕ್ಕಳ ಓದಿಗೋ, ಮದುವೆಗೋ, ಅನಾರೋಗ್ಯಕ್ಕೋ ಭಯ ಬಿದ್ದು ಹೂಡಿಕೆ ಮಾಡುತ್ತದೆ.

ಮೇಲ್‌ವರ್ಗ, ಮೇಲ್ಮಧ್ಯಮವರ್ಗ ಹೀಗೆ ಮಾಡೋಲ್ಲ. ಮದುವೆಗೆ ಜಮೀನು, ಸೈಟೋ, ಚಿನ್ನವೋ ತೆಗೆದಿಡುತ್ತಾರೆ. ಇವರ ಹೂಡಿಕೆ ಹಿಡಿ ಹಿಡಿಯಾಗಿರುತ್ತದೆ. ಒಮ್ಮೆಗೆ, ಒಂದೇ ಕಂತಿನಲ್ಲಿ ಪಾವತಿಸುವ ವಿಮೆಗಳನ್ನು ಕೊಂಡು ಸುಮ್ಮನಾಗುತ್ತಾರೆ.  ಹೂಡಿಕೆ ಅಂದರೇ ಪದೇ ಪದೇ ತಲೆ ಕೆಡಿಸಿಕೊಳ್ಳುವ ಪ್ರಮೇಯ ಇಟ್ಟುಕೊಳ್ಳುವುದಿಲ್ಲ. ಇಂತಿಪ್ಪ ಹೂಡಿಕೆದಾರರಲ್ಲಿ ಮೇಲ್ವರ್ಗ ಕೈಕಟ್ಟಿ ಕುಳಿತುಕೊಂಡಿದೆ. ಈ ವರ್ಗದ ಹೂಡಿಕೆ ಎಂದರೆ ಹೆಚ್ಚು ಕಮ್ಮಿ ಕಪ್ಪು ಹಣ. ಕೃಷಿ ಮಾಡಲು, ವೀಕೆಂಡ್‌ ಕಳೆಯಲು,

ಕೃಷಿ ಮಾಡುತ್ತಲೇ ಡೆವಲಪ್‌ ಆದಾಗ ಸೈಟುಗಳನ್ನು ಮಾಡಲು. ಹೀಗೆ ನಾನಾ ಬಗೆಯ ಉದ್ದೇಶಗಳಿರುವವರು ಈ ದಿನಗಳಲ್ಲಿ ಹೂಡಿಕೆಯಿಂದ ದೂರ ನಿಂತಿದ್ದಾರೆ. ಈ ಕಾರಣದಿಂದ, ಬೆಲೆಗಳು ಹಾಗೇ ಇದ್ದರೂ ಬೇಡಿಕೆ ಬಿದ್ದು ಹೋಗಿದೆ. ಕಳೆದ ಒಂದೂವರೆ ವರ್ಷದಲ್ಲಿ ಹೂಡಿಕೆ ಮತ್ತು ಬೇಡಿಕೆ ಎರಡೂ ಶೇ. 50ರಷ್ಟು ಕುಸಿದಿದೆ. ಸರ್ಕಾರಿ ನಿರ್ದೇಶಿತ ಬೆಲೆಗಳು ಏರಿವೆ. ಅದರಲ್ಲೂ ಜಮೀನುಗಳ ಸರ್ಕಾರಿ ನಿರ್ದೇಶಿತ ಬೆಲೆ ಅಷ್ಟೇ ಇದೆಯಾದರೂ ಬೇಡಿಕೆ ಎರಡು ವರ್ಷದ ಹಿಂದಿನಷ್ಟು ಇಲ್ಲ. 

* ಕಟ್ಟೆ ಗುರುರಾಜ್


ಇಂದು ಹೆಚ್ಚು ಓದಿದ್ದು

Trending videos

Back to Top