CONNECT WITH US  

ಸಮಾಜ ಒಡೆದಿದ್ದೇ ಕಾಂಗ್ರೆಸ್‌ ಸಾಧನೆ

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಸಮಾಜವನ್ನು ಒಡೆದ ಕನ್ನಡಿಯಾಗಿಸಿದೆ. ಇದೊಂದೇ ಕಾಂಗ್ರೆಸ್‌ನ ಸಾಧನೆ ಎಂದು ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ಡಾ.ಅಶ್ವತ್ಥ್ ನಾರಾಯಣ ಹೇಳಿದರು.

ತಮ್ಮ ಕ್ಷೇತ್ರದ ವ್ಯಾಪ್ತಿಯ ಕ್ರೈಸ್ತ ಸಮುದಾಯದ ಧರ್ಮಗುರುಗಳನ್ನು ಭೇಟಿಯಾದ ನಂತರ ಮಾತನಾಡಿದ ಅವರು, ಸರ್ಕಾರಗಳು ಪಾರದರ್ಶಕ ಆಡಳಿತ ನೀಡುವ ಗುರಿ ಹೊಂದಿರಬೇಕು. ಜನಸಾಮಾನ್ಯರಿಗೆ ಒದಗಬೇಕಾದ ಸೇವೆಗಳನ್ನು ಸುಗಮಗೊಳಿಸುವ ಕೆಲಸ ಮಾಡಬೇಕು. ಆದರೆ, ಕಾಂಗ್ರೆಸ್‌ ಒಡೆದು ಆಳುವ ನೀತಿಯನ್ನು ಮುಂದುವರಿಸಿದೆ. ಸಮಾಜವನ್ನು ಜಾತಿ ಮತ್ತು ಧರ್ಮಗಳ ಆಧಾರದಲ್ಲಿ ಒಡೆಯುವ ಮೂಲಕ ಓಟ್‌ ಬ್ಯಾಂಕ್‌ ರಾಜಕೀಯ ಮಾಡುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಐದು ವರ್ಷಗಳ ಕಾಂಗ್ರೆಸ್‌ ಆಡಳಿತ ಮತದಾರರಲ್ಲಿ ನಿರಾಶೆ ಮೂಡಿಸಿದೆ. ಕೆಟ್ಟ ಆಡಳಿತದ ಕಾರಣ ಕಮಿಷನ್‌ ನೀಡದೆ ಯಾವ ಕೆಲಸವೂ ನಡೆಯುತ್ತಿಲ್ಲ. ರಾಜ್ಯದಲ್ಲಿ ದಕ್ಷ ಆಡಳಿತ ಇದ್ದಾಗ ಸಮಾಜದ ಅಭ್ಯುದಯ ಸಾಧ್ಯ. ಸೌಹಾರ್ದಯುತ ಸಮಾಜ ನಿರ್ಮಾಣ ಬಿಜೆಪಿಯ ಮೂಲ ಉದ್ದೇಶ. ಬೂಟಾಟಿಕೆಗಾಗಿ ಸರ್ವ ಧರ್ಮ ಸಮಾನದ ಮಾತನಾಡುವ ಪಕ್ಷ ನಮ್ಮದಲ್ಲ ಎಂದರು.

ಯಾವ ಧರ್ಮವನ್ನೂ ನಾವು ಓಟ್‌ ಬ್ಯಾಂಕ್‌ ರೀತಿ ನೋಡುವುದಿಲ್ಲ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮೇಲೆತ್ತುವಾಗ ಜಾತಿ ಕೇಳಿ ಕೈ ನೀಡುವ ಮನಸ್ಥಿಯವರು ನಾವಲ್ಲ. ನಮ್ಮ ಪ್ರದೇಶ, ನಮ್ಮ ದೇಶ ಸರ್ವಾಂಗೀಣ ಅಭಿವೃದ್ಧಿ ಕಾಣಬೇಕೆಂದರೆ ಧಾರ್ಮಿಕ ಚೌಕಟ್ಟನ್ನು ರಾಜಕೀಯ ಮೀರಬೇಕು. ರಾಜಕಾರಣಿಗಳು ಸಮಾಜವನ್ನು ಇಡಿಯಾಗಿ ಕಾಣುವ ಕಣ್ಣು ಹೊಂದಿರಬೇಕು. ಇದನ್ನು ಮೋದಿಯವರ ಸಬ್‌ ಕಾ ಸಾಥ್‌-ಸಬ್‌ ಕಾ ವಿಕಾಸ್‌ ಮಂತ್ರದಲ್ಲಿದೆ ಎಂದು ಹೇಳಿದರು.


ಇಂದು ಹೆಚ್ಚು ಓದಿದ್ದು

Trending videos

Back to Top