CONNECT WITH US  

ನಿರೀಕ್ಷಿತ ಅನುದಾನ ಸಿಗದಿದ್ದರೂ ಕ್ಷೇತ್ರ ಅಭಿವೃದ್ಧಿಯಾಗಿದೆ

ಬೆಂಗಳೂರು: ಕಳೆದ ಒಂದು ದಶಕದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಪ್ರಮಾಣಿಕವಾಗಿ ಕೆಲಸ ಮಾಡಿದ್ದು, ಸಂಚಾರ ದಟ್ಟಣೆ ನಿಯಂತ್ರಣ, ಕೆರೆಗಳ ಸಂರಕ್ಷಣೆ, ಗ್ರಾಮೀಣ ಭಾಗಗಳಿಗೆ ಮೂಲ ಸೌಕರ್ಯ, ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ವಿಚಾರಗಳಿಗೆ ಈ ಬಾರಿ ಆದ್ಯತೆ ನೀಡಲಾಗುವುದು ಎಂದು ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರವಿಂದ ಲಿಂಬಾವಳಿ ತಿಳಿಸಿದರು.

ಮಹದೇವಪುರ ಕ್ಷೇತ್ರದಿಂದ ಹ್ಯಾಟ್ರಿಕ್‌ ಗೆಲುವಿಗಾಗಿ ಬಿಜೆಪಿಯಿಂದ ಮತ್ತೂಮ್ಮೆ ಕಣಕ್ಕಿಳಿದಿರುವ ಅವರು ಚುನಾವಣೆ ಹಿನ್ನೆಲೆಯಲ್ಲಿ "ಉದಯವಾಣಿ'ಗೆ ನೀಡಿದ ಸಂದರ್ಶನದಲ್ಲಿ ಸರ್ಕಾರದಿಂದ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ದೊರೆಯದಿದ್ದರೂ, ಕೇಂದ್ರ ಹಾಗೂ ಶಾಸಕರ ಅನುದಾನದಲ್ಲಿಯೇ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ ಎಂದು ಹೇಳಿದರು.

* 10 ವರ್ಷದಿಂದ ನೀವೇ ಶಾಸಕರಾಗಿದ್ದರೂ ಕ್ಷೇತ್ರದ ಸಮಸ್ಯೆಗಳು ಪರಿಹಾರವಾಗದಿರಲು ಕಾರಣ?
ಮಹದೇವಪುರ ಕ್ಷೇತ್ರ ಮಾಹಿತಿ ತಂತ್ರಜ್ಞಾನದ ಹಬ್‌ ಆಗಿದ್ದು, ಸಾವಿರಾರು ಕಂಪನಿಗಳಿವೆ. ಕ್ಷೇತ್ರದಲ್ಲಿ 8 ಲಕ್ಷ ಜನರಿದ್ದು, ನಿತ್ಯ 12-15 ಲಕ್ಷ ಜನರು ಕ್ಷೇತ್ರಕ್ಕೆ ಬಂದು ಹೋಗುತ್ತಿದ್ದಾರೆ. ಪ್ರಮುಖವಾಗಿ ಸಂಚಾರ ದಟ್ಟಣೆ ಸಮಸ್ಯೆ ಜನರನ್ನು ಕಾಡುತ್ತಿದ್ದು, ಈಗಾಗಲೇ ಮೆಟ್ರೋ ಕಾಮಗಾರಿ ಆರಂಭವಾಗಿದೆ. ಉಳಿದಂತೆ ದಟ್ಟಣೆ ನಿವಾರಣೆಗೆ ಎಲಿವೇಟೆಡ್‌ ಕಾರಿಡಾರ್‌ ನಿರ್ಮಾಣವಾಗಬೇಕಿದೆ.

* ಕ್ಷೇತ್ರದ ಅಭಿವೃದ್ಧಿಗೆ ನಿಮ್ಮ ಮುಂದಿನ ಯೋಜನೆಗಳೇನು?
ಕ್ಷೇತ್ರದಲ್ಲಿ ಆಗಬೇಕಿರುವ ಕೆಲಸಗಳಿಗೆ ಸಂಬಂಧಿಸಿದಂತೆ ಜನಾಭಿಪ್ರಾಯ ರೂಪಿಸಲಾಗಿದೆ. ಸಂಚಾರ ದಟ್ಟಣೆ, ಪರಿಸರ ಸಂರಕ್ಷಣೆ, ಮೂಲ ಸೌಕರ್ಯ, ಕಾನೂನು ಸುವ್ಯವಸ್ಥೆ ಹಾಗೂ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿಯನ್ನು ಕ್ಷೇತ್ರದ ಅಭಿವೃದ್ಧಿಗೆ ಬಳಸುವ ಉದ್ದೇಶವಿದೆ. ಅವುಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಿಕೊಳ್ಳಲಾಗಿದೆ.

* ಕೆರೆಗಳಲ್ಲಿ ಬೆಂಕಿ ಕಾಣಿಸಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದರೂ ಶಾಸಕರು ಕ್ರಮ ಕೈಗೊಂಡಿಲ್ಲ ಎಂಬ ಆರೋಪವಿದೆಯಲ್ಲಾ?
ಕೈಕೊಂಡ್ರಹಳ್ಳಿ, ಕಸವನಹಳ್ಳಿ, ದೊಡ್ಡನೆಕ್ಕುಂದಿ ಸೇರಿ ಕ್ಷೇತ್ರದ ಹಲವಾರು ಕೆರೆಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳಲ್ಲಿ ಸಮಸ್ಯೆ ನಿವಾರಣೆಗೆ ಮುಂದಾಗುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಸೂಚನೆ ನೀಡಿದ್ದರೂ, ಸರ್ಕಾರ ಕ್ರಮಕ್ಕೆ ಮುಂದಾಗಿಲ್ಲ.

* ಸರ್ಕಾರದಿಂದ ನಿಮ್ಮ ಕ್ಷೇತ್ರಕ್ಕೆ ಅನುದಾನವೇ ಬಂದಿಲ್ಲವೇ?
ರಾಜ್ಯ ಸರ್ಕಾರಕ್ಕೆ ಮಹದೇವಪುರ ಕ್ಷೇತ್ರದಿಂದ ಹೆಚ್ಚಿನ ತೆರಿಗೆ ಸಂಗ್ರಹವಾಗುತ್ತಿದೆ. ಆದರೆ, ಸರ್ಕಾರ ಅನುದಾನ ನೀಡುವಲ್ಲಿ ಮಾತ್ರ ತಾರತಮ್ಯ ಮಾಡಿದೆ. ಬಿಜೆಪಿ ಸರ್ಕಾರವಿದ್ದಾಗ 1400 ಕೋಟಿ ರೂ. ಅನುದಾನ ಬಂದಿತ್ತು. ಆದರೀಗ ಕೇವಲ 798 ಕೋಟಿ ರೂ. ಬಂದಿದ್ದು, ಹೆಚ್ಚಿನ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಿಲ್ಲ.

* ಸರ್ಕಾರದಿಂದ ಬಂದಿರುವ ಅನುದಾನ ದುರ್ಬಳಕೆಯಾಗಿದೆ ಎಂಬ ಆರೋಪವಿದೆ?
ನೋಡಿ, ನಮ್ಮ ಕ್ಷೇತ್ರಕ್ಕೆ ಸರ್ಕಾರದಿಂದ ಬರುವ ಅನುದಾನವೆಷ್ಟು? ಯಾವ ಕಾಮಗಾರಿಗೆ ಎಷ್ಟು ಖರ್ಚು ಮಾಡಲಾಗಿದೆ ಎಂಬ ಮಾಹಿತಿ ಆನ್‌ಲೈನ್‌ನಲ್ಲಿ ಲಭ್ಯವಿದೆ. ಜತಗೆ ಅನುದಾನ ಬಳಕೆಯಾಗಿರುವ ಬಗ್ಗೆ ಸಂಪೂರ್ಣ ಮಾಹಿತಿಯುಳ್ಳ ಕಿರುಹೊತ್ತಿಗೆ ಮುದ್ರಿಸಿ ಕ್ಷೇತ್ರದ ಜನತೆಗೆ ವಿತರಿಸಲಾಗಿದೆ. ಹೀಗಿರುವಾಗ ದುರ್ಬಳಕೆಯಾಗಲು ಹೇಗೆ ಸಾಧ್ಯ. ಕೇವಲ ಆರೋಪ ಮಾಡುವುದು ಬಿಟ್ಟು, ದಾಖಲೆಗಳನ್ನು ನೀಡಲಿ.

* ರಾಜ್ಯದಲ್ಲಿ ಬಿಜೆಪಿ ಸ್ಥಿತಿ ಹೇಗಿದೆ ?
ರಾಜ್ಯದಲ್ಲಿ ಈ ಬಾರಿ ಖಂಡಿತವಾಗಿಯೂ ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ.

* ಬಿಜೆಪಿಯಲ್ಲಿ ಪ್ರಭಾವಿ ನಾಯಕರಾಗಿರುವ ನೀವು ನಿಮ್ಮ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದ್ದೀರಿ?
ಹಾಗೇನಿಲ್ಲ. ನನ್ನ ಕ್ಷೇತ್ರ ಮಾತ್ರವಲ್ಲದೆ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಯೂ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿದ್ದೇನೆ. ಪಕ್ಷ ವಹಿಸಿರುವ ಕೆಲಸ ಮಾಡುತ್ತಿದ್ದೇನೆ.

* ಕೆರೆ, ಕಾಲುವೆ ಒತ್ತುವರಿ ತೆರವಿಗೆ ಮುಂದಾಗದಿರಲು ಕಾರಣವೇನು?
ಕೆರೆ ಹಾಗೂ ರಾಜಕಾಲುವೆ ಒತ್ತುವರಿ ಮಾಫಿಯಾಗಳಿಗೆ ಸರ್ಕಾರದ ಆರ್ಶೀವಾದವಿದೆ. ಕ್ಷೇತ್ರದಲ್ಲಿ ಹಲವಾರು ಬಾರಿ ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾದರೂ ಸ್ಥಳೀಯರ ಮೂಲಕ ಒತ್ತಡ ತಂದಿರುವ ಮಾಫಿಯಾದವರು, ಕಾರ್ಯಾಚರಣೆಗೆ ಅಡ್ಡಿಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕಾಗಿ ಅಧಿಕಾರಿಗಳು ಹಾಗೂ ನಾಗರಿಕರನ್ನು ಒಳಗೊಂಡ ವಿಶೇಷ ದಳ ರಚಿಸಲಾಗುವುದು.

* ವೆಂ.ಸುನೀಲ್‌ಕುಮಾರ್‌


ಇಂದು ಹೆಚ್ಚು ಓದಿದ್ದು

Trending videos

Back to Top