CONNECT WITH US  

ಉ.ಭಾರತದಲ್ಲಿಂದು ಬಿರುಗಾಳಿ ಹಾವಳಿ

ನವದೆಹಲಿ: ದೇಶದ 13 ರಾಜ್ಯಗಳು, 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೋಮವಾರ ಗಾಳಿ, ಸಿಡಿಲಿನಿಂದ ಕೂಡಿದ ಮಳೆಯಾಗಿದ್ದು, ಉತ್ತರ ಭಾರತದಾದ್ಯಂತ ಮಂಗಳವಾರ ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳು ರಕ್ಷಣಾ ಹಾಗೂ ಪರಿಹಾರ ತಂಡಗಳನ್ನು ಸನ್ನದ್ಧ ಸ್ಥಿತಿಯಲ್ಲಿಟ್ಟಿವೆ. 

ಜಮ್ಮು-ಕಾಶ್ಮೀರ, ಉತ್ತರಾಖಂಡ, ಹಿಮಾಚಲಪ್ರದೇಶ, ಹರ್ಯಾಣ, ದೆಹಲಿ, ಚಂಡೀಗಡ, ಪಶ್ಚಿಮ ಉತ್ತರ ಪ್ರದೇಶ, ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಗಂಟೆಗೆ 50ರಿಂದ 70 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದ್ದು, ಹೈಅಲರ್ಟ್‌ ಘೋಷಿಸಲಾಗಿದೆ. ಮೇ 11ರವರೆಗೂ ಇದೇ ಸ್ಥಿತಿ ಮುಂದುವರಿಯಲಿದೆ. ಆದರೆ, ಗಾಳಿಯ ತೀವ್ರತೆಯು ಮೇ 2ರ ಧೂಳುಬಿರುಗಾಳಿಗಿಂತ ಕಡಿಮೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ಅಂದಿನ ಬಿರುಗಾಳಿಗೆ ಉತ್ತರಪ್ರದೇಶ, ರಾಜಸ್ಥಾನದಲ್ಲಿ 100ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.

ಇಬ್ಬರ ಸಾವು: ಸೋಮವಾರ ಮಧ್ಯಪ್ರದೇಶದಲ್ಲಿ ಬೀಸಿದ ಬಿರುಗಾಳಿಗೆ ಹಲವು ಮನೆಗಳು ನೆಲಸಮವಾಗಿದ್ದು, ಇಬ್ಬರು ಮೃತಪಟ್ಟು, 15 ಮಂದಿ ಗಾಯಗೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ 200ಕ್ಕೂ ಹೆಚ್ಚು ಮನೆಗಳು ನೆಲಸಮವಾಗಿವೆ. ಹರ್ಯಾಣದಲ್ಲಿ ಮಂಗಳವಾರವೂ ಶಾಲೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಗಾಳಿಯ ವೇಗವು ಗಂಟೆಗೆ 90 ಕಿ.ಮೀ.ಗಿಂತ ಹೆಚ್ಚಿದ್ದರೆ, ದೆಹಲಿಯಲ್ಲಿ ಮೆಟ್ರೋ ಸಂಚಾರ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಬೀಸುತ್ತಿರುವ ಬಿರುಗಾಳಿಗೆ ಹಲವು ಮನೆಗಳ ಚಾವಣಿಗಳು ಹಾರಿಹೋಗಿದ್ದು, ಅನೇಕ ಮರಗಳು ಧರೆಗುರುಳಿವೆ. ಗುಜರಾತ್‌ನ ಇಬ್ಬರು ಯಾತ್ರಿಗಳು ಗಾಯಗೊಂಡಿದ್ದಾರೆ. ರಾಜಸ್ಥಾನ, ಉತ್ತರಪ್ರದೇಶ, ಒಡಿಶಾದಲ್ಲಿ ಭಾರೀ ಬೆಳೆ ಹಾನಿ ಸಂಭವಿಸಿದ್ದು, ರೈತರು ಕಂಗಾಲಾಗಿದ್ದಾರೆ. 


ಇಂದು ಹೆಚ್ಚು ಓದಿದ್ದು

Trending videos

Back to Top