CONNECT WITH US  

ವಯನಾಡಿನಿಂದ ರಾಹುಲ್‌ ಸ್ಪರ್ಧೆ?

ಕೇರಳ ಕಾಂಗ್ರೆಸ್‌ ಮುಖಂಡರ ಆಗ್ರಹ

ತಿರುವನಂತಪುರ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಉತ್ತರ ಪ್ರದೇಶದ ಅಮೇಠಿಯಲ್ಲಿ ಸ್ಪರ್ಧಿಸುವುದರ ಜತೆಗೆ ಮತ್ತೂಂದು ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ಊಹಾಪೋಹಗಳು ಹುಟ್ಟಿಕೊಳ್ಳುತ್ತಲೇ ಇವೆ. ಇದೇ ವೇಳೆ, ದಕ್ಷಿಣ ಭಾರತದ ಕೇರಳ ಹಾಗೂ ಕರ್ನಾಟಕದ ನಾಯಕರು ಅವರನ್ನು ಇಲ್ಲೇ ಸ್ಪರ್ಧಿಸಿ ಎಂದು ಆಹ್ವಾನಿಸುತ್ತಿದ್ದಾರೆ. ಈಗ ಕೇರಳದ ವಯ ನಾಡಿನಿಂದ ಸ್ಪರ್ಧಿಸುವಂತೆ ಆಗ್ರಹಿಸಲಾಗಿದೆ. ಆದರೆ ರಾಹುಲ್‌ ಈ ಬಗ್ಗೆ ಯಾವುದೇ ನಿರ್ಧಾರ ತಿಳಿಸಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಊಮ್ಮನ್‌ ಚಾಂಡಿ ಹೇಳಿದ್ದಾರೆ. ಇದೇ ಅಭಿಪ್ರಾಯವನ್ನು ಕಾಂಗ್ರೆಸ್‌ ಮುಖ್ಯ ವಕ್ತಾರ ರಣದೀಪ್‌ ಸಿಂಗ್‌ ಸುಜೇìವಾಲ ಕೂಡ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ, ಕೇರಳ ಕಾಂಗ್ರೆಸ್‌ ಮುಖ್ಯಸ್ಥ ಮುಲ್ಲಪಲ್ಲಿ ರಾಮಚಂದ್ರನ್‌ ಪ್ರಕಾರ, ರಾಹುಲ್‌ ಈ ಪ್ರಸ್ತಾವಕ್ಕೆ ಒಪ್ಪಿದ್ದಾರೆ. ಒಂದು ತಿಂಗಳಿಂದಲೂ ಈ ಬಗ್ಗೆ ಚರ್ಚೆ ನಡೆಯುತ್ತಿತ್ತು. ಮೊದಲು ಒಪ್ಪಿರಲಿಲ್ಲ, ಈಗ ಸಮ್ಮತಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಮೂಲಗಳ ಪ್ರಕಾರ, ರಾಹುಲ್‌ ಬಳಿ ಕರ್ನಾಟಕದಿಂದ ಬೆಂಗಳೂರು ಕೇಂದ್ರ, ಬೀದರ್‌ ಮತ್ತು ಮೈಸೂರು, ತಮಿಳುನಾಡಿನ ಕನ್ಯಾಕುಮಾರಿ ಮತ್ತು ಶಿವಗಂಗಾ, ಕೇರಳದ ವಯನಾಡ್‌ ಕ್ಷೇತ್ರಗಳು ಆಯ್ಕೆ ಪ್ರಸ್ತಾವನೆಯಲ್ಲಿವೆ. 2008ರಲ್ಲಿ ಕೇರಳದಲ್ಲಿ ಕ್ಷೇತ್ರಗಳನ್ನು ಪುನಾರಚನೆ ಮಾಡುವಾಗ ಕಣ್ಣೂರು ಮತ್ತು ಮಲಪ್ಪುರಂನ ಕೆಲವು ಪ್ರದೇಶಗಳನ್ನು ಸೇರಿಸಿ ವಯನಾಡ್‌ ಕ್ಷೇತ್ರವನ್ನು ಸ್ಥಾಪಿಸಲಾಗಿದೆ. ಕಳೆದ ಬಾರಿ ಕಾಂಗ್ರೆಸ್‌ನಿಂದ ಎಂ.ಎಲ್‌. ಶಹನವಾಜ್‌ ಆಯ್ಕೆಯಾಗಿದ್ದರು. ಅವರು ಅನಾರೋಗ್ಯದಿಂದ ಆರು ತಿಂಗಳ ಹಿಂದೆ ನಿಧನ ಹೊಂದಿದ್ದು, ಮಾಜಿ ಯುವ ಕಾಂಗ್ರೆಸ್‌ ಅಧ್ಯಕ್ಷ ಟಿ. ಸಿದ್ದಿಕಿ ಸ್ಪರ್ಧಿಸಲಿದ್ದಾರೆ. ಆದರೆ ರಾಹುಲ್‌ ಸ್ಪರ್ಧಿಸುವುದಾದರೆ ಕ್ಷೇತ್ರ ಬಿಟ್ಟುಕೊಡುತ್ತೇನೆ ಎಂದು ಅವರು ಈಗಾಗಲೇ ಹೇಳಿದ್ದಾರೆ.


ಇಂದು ಹೆಚ್ಚು ಓದಿದ್ದು

Trending videos

Back to Top