CONNECT WITH US  

ಶ್ರೀ ಆದಿಶಕ್ತಿ ಕನ್ನಡ ಶಾಲೆಯಲ್ಲಿ 59ನೇ ಮಹಾರಾಷ್ಟ್ರ ದಿನಾಚರಣೆ

ಥಾಣೆ: ಥಾಣೆಯ ಮಾಜಿವಾಡದ ಶ್ರೀ ಆದಿಶಕ್ತಿ ಕನ್ನಡ ಸಂಘ ಸಂಚಾಲಿತ ಶ್ರೀ ಆದಿಶಕ್ತಿ ಕನ್ನಡ ಶಾಲೆಯಲ್ಲಿ 59ನೇ ಮಹಾರಾಷ್ಟ್ರ ದಿನಾಚರಣೆಯನ್ನು ಶಾಲಾ ಸಭಾಗೃಹದಲ್ಲಿ ಆಚರಿಸಲಾಯಿತು.

ಅಭಿಮಾನ ಇರಬೇಕು
ಶ್ರೀ ಆದಿಶಕ್ತಿ ಕನ್ನಡ ಸಂಘದ ಅಧ್ಯಕ್ಷರಾದ ಭಾಸ್ಕರ್‌ ಎಂ. ಶೆಟ್ಟಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ವಿದ್ಯಾರ್ಥಿ ಗಳು ಭಾಷಾಬಾಂಧವ್ಯವನ್ನು ಮರೆತು ಶಿಕ್ಷಣ ಪಡೆಯಬೇಕು. ಮಹಾರಾಷ್ಟ್ರದ ನಾಡು ನುಡಿಯ ಬಗ್ಗೆ ವಿದ್ಯಾರ್ಥಿಗಳಿಗೆ ಅಭಿಮಾನವಿರಬೇಕು ಎಂದರು. ಕಾರ್ಮಿಕ ದಿನಾಚರಣೆಯ ಮಹತ್ವದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು.

ಸಂಘ ಹಾಗೂ ಶಾಲೆಯ ಮಾಜಿ ಅಧ್ಯಕ್ಷರಾದ ಶಿಮಂತೂರು ಶಂಕರ ಶೆಟ್ಟಿ ಅವರು ಮಾತನಾಡಿ, ಜನ್ಮಭೂಮಿ ಮತ್ತು ಕರ್ಮಭೂಮಿಯ ಋಣವನ್ನು ತೀರಿಸುವ ಕಾರ್ಯದಲ್ಲಿ ನಾವು ತೊಡಗಬೇಕು. ಕರ್ನಾಟಕ ನಮಗೆ ಜನ್ಮ ಭೂಮಿಯಾದರೆ ಮಹಾರಾಷ್ಟ್ರ ಕರ್ಮಭೂಮಿಯಾಗಿದೆ. ಕರ್ಮಭೂಮಿಯಲ್ಲಿರುವ ನಾವು ಇಲ್ಲಿನ ಸಂಸ್ಕೃತಿ, ಸಂಸ್ಕಾರಗಳನ್ನು ಗೌರವಿಸುವ ಗುಣವನ್ನು ಬೆಳೆಸಿಕೊಳ್ಳಬೇಕು ಎಂದು ನುಡಿದರು.

ಸಂಘ ಹಾಗೂ ಶಾಲೆಯ ಇನ್ನೋರ್ವ ಮಾಜಿ ಅಧ್ಯಕ್ಷರಾದ ಜಯರಾಮ್‌ ಜಿ. ಶೆಟ್ಟಿ ಅವರು ಮಾತನಾಡುತ್ತ, ಕರ್ನಾಟಕ ಹಾಗೂ ಮಹಾರಾಷ್ಟ್ರ ಸಂಸ್ಕೃತಿಗಳಲ್ಲಿ ಹೊಂದಾಣಿಕೆ ಇದ್ದರೂ ಮಹಾರಾಷ್ಟ್ರದ ಪ್ರಗತಿಯ ಬಗ್ಗೆ ನಾವು ಶ್ರಮಿಸೋಣ ಎಂದು ನುಡಿದರು.

ವೇದಿಕೆಯಲ್ಲಿ ಸಂಘದ ಕಾರ್ಯದರ್ಶಿಯಾದ ವಾದಿರಾಜ ಶೆಟ್ಟಿ, ಪ್ರಾಥಮಿಕ ಶಾಲೆಯ ಹಿರಿಯ ಶಿಕ್ಷಕಿ ಪುಷ್ಪಾ ಆರ್‌. ಕುಂಬ್ಳೆ ಅವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಮಹಾರಾಷ್ಟ್ರ ಗೀತೆಯ ಗಾಯನದೊಂದಿಗೆ ಕಾರ್ಯಕ್ರಮವು ಚಾಲನೆಗೊಂಡಿತು. ಮಾಧ್ಯಮಿಕ ವಿಭಾಗದ ಮುಖ್ಯ ಶಿಕ್ಷಕಿ ವಿಮಲಾ ಕರ್ಕೇರ ಸ್ವಾಗತಿಸಿದರು. ಮಹಾರಾಷ್ಟ್ರ ದಿನ ಮತ್ತು ಕಾರ್ಮಿಕ ದಿನಾಚರಣೆಯ ಕುರಿತು ಶಾಲಾ ವಿದ್ಯಾರ್ಥಿನಿ ಪ್ರತಿಭಾ ಜವಳಗಿ ಮಾತನಾಡಿದರು. ಮಾಧ್ಯಮಿಕ ವಿಭಾಗದ ಸಹ ಶಿಕ್ಷಕರಾದ ವೆಂಕಟರಮಣ ಶೆಣೈ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ವಿದ್ಯಾರ್ಥಿಗಳಿಗೆ ಸಿಹಿತಿಂಡಿಯನ್ನು ವಿತರಿಸಲಾಯಿತು. ಶ್ರೀ ಆದಿಶಕ್ತಿ ಕನ್ನಡ ಸಂಘದ ಪದಾಧಿಕಾರಿಗಳು, ಶಿಕ್ಷಕ ವೃಂದದವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ರಾಷ್ಟ್ರಗೀತೆಯೊಂದಿಗೆ ಕಾರ್ಯ ಕ್ರಮವು ಮುಕ್ತಾಯವಾಯಿತು.


ಇಂದು ಹೆಚ್ಚು ಓದಿದ್ದು

Trending videos

Back to Top