CONNECT WITH US  

ಫ್ಲಿಪ್‌ಕಾರ್ಟ್‌ ಖರೀದಿ ಯುದ್ಧದಲ್ಲಿ ಗೆದ್ದ ವಾಲ್‌ಮಾರ್ಟ್‌

ಆನ್‌ಲೈನ್‌ ಶಾಪಿಂಗ್‌ ಸಂಸ್ಥೆ ಫ್ಲಿಪ್‌ಕಾರ್ಟ್‌ ಅನ್ನು ಖರೀದಿಸುವ ದೊಡ್ಡ ಪೈಪೋಟಿಯಲ್ಲಿ ಅಮೆರಿಕದ ದೈತ್ಯ ರಿಟೇಲರ್‌ ಸಂಸ್ಥೆ ವಾಲ್‌ಮಾರ್ಟ್‌ಗೆ ಜಯ ಸಿಕ್ಕಿದೆ. ಫ್ಲಿಪ್‌ಕಾರ್ಟ್‌ನ ಶೇ.75ಕ್ಕೂ ಹೆಚ್ಚು ಷೇರುಗಳ ಖರೀದಿಗೆ ವಾಲ್‌ ಮಾರ್ಟ್‌ ನೀಡಿದ್ದ 1 ಲಕ್ಷ ಕೋಟಿ ರೂ.ಗಳ ಆಫ‌ರ್‌ ಅನ್ನು ಫ್ಲಿಪ್‌ಕಾರ್ಟ್‌ ಆಡಳಿತ ಮಂಡಳಿ ಶುಕ್ರವಾರ ಒಪ್ಪಿಕೊಂಡಿದೆ ಎಂದು ದಿ ಎಕನಾಮಿಕ್‌ ಟೈಮ್ಸ್‌ ಹೇಳಿದೆ. ಹಾಗಾದರೆ, ಫ್ಲಿಪ್‌ಕಾರ್ಟ್‌ನ ಷೇರುದಾರರ ಮುಂದಿನ ನಡೆಯೇನು, ಮಾರಾಟ ಪೈಪೋಟಿಯಲ್ಲಿ ಅಮೆಜಾನ್‌ ಸೋತಿದ್ದೇಕೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.  

ವಾಲ್‌ ಜತೆ ಉಳಿವವರು
ಮಾರಾಟದ ನಂತರವೂ ಆಲಬೆಟ್‌ ಸಂಸ್ಥೆ ವಾಲ್‌ಮಾರ್ಟ್‌ ಜತೆ ಫ್ಲಿಪ್‌ಕಾರ್ಟ್‌ನಲ್ಲಿ ಮುಂದುವರಿದು, ಮತ್ತಷ್ಟು ಹೂಡಿಕೆ ಮಾಡಲು ನಿರ್ಧರಿಸಿದೆ. ಇನ್ನು, ಟೆನ್ಸೆಂಟ್‌ ಹೋಲ್ಡಿಂಗ್ಸ್‌, ನ್ಯಾಸ್ಪೆರ್ಸ್‌, ಮೈಕ್ರೋಸಾಫ್ಟ್ ಸಂಸ್ಥೆಗಳೂ ತಮ್ಮ ಪುಟ್ಟ ಷೇರುಗಳೊಂದಿಗೆ ವಾಲ್‌ಮಾರ್ಟ್‌ ಜತೆಗೆ ಮುಂದುವರಿಯಲಿವೆ.

ದೊಡ್ಡ ಲಾಭ ಯಾರಿಗೆ?
ಮಾರಾಟದಿಂದ ದೊಡ್ಡ ಲಾಭ ಆಗುತ್ತಿರುವುದು ಜಪಾನ್‌ ಮೂಲದ ಸಾಫ್ಟ್ಬ್ಯಾಂಕ್‌ಗೆ. ಕಳೆದ ವರ್ಷವಷ್ಟೇ, ಫ್ಲಿಪ್‌ಕಾರ್ಟ್‌ ನಲ್ಲಿ 16,000 ಕೋಟಿ ಹೂಡಿಕೆ ಮಾಡಿದ್ದ ಈ ಸಂಸ್ಥೆ, ಖರೀದಿ ನಂತರ ತನ್ನ ಪಾಲಿನ ಶೇ.20ರಷ್ಟು ಷೇರನ್ನು ವಾಲ್‌ಮಾರ್ಟ್‌ಗೆ ಮಾರಲು ತೀರ್ಮಾನಿಸಿದೆ. ಇದರಿಂದ, ಅದು 26,000 ಕೋಟಿ ರೂ. ಗಳಿಸಲಿದ್ದು, 10,000 ಕೋಟಿ ರೂ. ಲಾಭ ಪಡೆಯಲಿದೆ. 

ಬನ್ಸಲ್‌ ರಾಜೀನಾಮೆ?
ಮಾರಾಟ ಪ್ರಕ್ರಿಯೆ ಮುಗಿದ ಕೂಡಲೇ ಫ್ಲಿಪ್‌ಕಾರ್ಟ್‌ನ ಆಡಳಿತ ಮಂಡಳಿಯ ಸದಸ್ಯರಲ್ಲೊಬ್ಬರಾದ ಸಂಸ್ಥೆಯ ಸಹ ಸಂಸ್ಥಾಪಕ ಸಚಿನ್‌ ಬನ್ಸಾಲ್‌, ಮಂಡಳಿ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆಂದು ಹೇಳಲಾಗಿದೆ. 

ಅಮೆಜಾನ್‌ ಸಂಸ್ಥೆಯ ಕಾರ್ಟ್‌ ಖಾಲಿ!
ಫ್ಲಿಪ್‌ಕಾರ್ಟ್‌ ಕೊಳ್ಳಲು, ಭಾರತದ 2ನೇ ಅತಿ ದೊಡ್ಡ ಇ-ಶಾಪಿಂಗ್‌ ಸಂಸ್ಥೆ ಅಮೆಜಾನ್‌, ವಾಲ್‌ಮಾರ್ಟ್‌ಗೆ ಸಡ್ಡು ಹೊಡೆಯಲು ಶತಾಯಗತಾಯ ಪ್ರಯತ್ನಿಸಿತ್ತು. ಆದರೆ, ಕೊನೆಗೂ ಈ ಪೈಪೋಟಿಯಲ್ಲಿ ವಾಲ್‌ಮಾರ್ಟ್‌ ಗೆದ್ದಿದೆ. ಅಮೆಜಾನ್‌, ತನ್ನ ಪ್ರಬಲ ಪ್ರತಿಸ್ಪರ್ಧಿಯಾಗಿದ್ದು ಮತ್ತು ಸಗಟು ಮಾರಾಟದಲ್ಲಿ ವಾಲ್‌ಮಾರ್ಟ್‌ಗೆ ಇರುವ ಭಾರೀ ಅನುಭವವನ್ನು ಗಮನದಲ್ಲಿಟ್ಟುಕೊಂಡು ವಾಲ್‌ ಮಾರ್ಟ್‌ ಆಫ‌ರ್‌ ಅನ್ನು ಫ್ಲಿಪ್‌ಕಾರ್ಟ್‌ ಒಪ್ಪಿದೆ.

ಪ್ರಮುಖ ಷೇರುದಾರರು
ಮೈಕ್ರೋಸಾಫ್ಟ್
ಸಾಫ್ಟ್ಬ್ಯಾಂಕ್‌ ಗ್ರೂಪ್‌
ಗೂಗಲ್‌ ಮಾತೃಸಂಸ್ಥೆ ಆಲಬೆಟ್‌ ಇಂಕ್‌
ಟೆನ್ಸೆಂಟ್‌ ಹೋಲ್ಡಿಂಗ್ಸ್‌ ಲಿ. 
ನ್ಯಾಸ್ಪೆರ್ಸ್‌ ಲಿಮಿಟೆಡ್‌ (ದಕ್ಷಿಣ ಆಫ್ರಿಕಾ)

2007ರಲ್ಲಿ ಫ್ಲಿಪ್‌ಕಾರ್ಟ್‌ ಅಸ್ತಿತ್ವಕ್ಕೆ ಬಂದ ವರ್ಷ
20,000ಕೋಟಿ ಫ್ಲಿಪ್‌ಕಾರ್ಟ್‌ ಸಂಸ್ಥೆಯ ವಾರ್ಷಿಕ ವಹಿವಾಟು

1,00,000 ಕೋಟಿ ಫ್ಲಿಪ್‌ಕಾರ್ಟ್‌ ಮಾರಾಟವಾದ ಮೊತ್ತ
75% ರಷ್ಟು ಷೇರುಗಳು ವಾಲ್‌ಮಾರ್ಟ್‌ಗೆ ಮಾರಾಟ


ಇಂದು ಹೆಚ್ಚು ಓದಿದ್ದು

Trending videos

Back to Top