CONNECT WITH US  

ಭಾರತಕ್ಕೆ ಐಪಿಎಲ್ ಜ್ವರ ಹಿಡಿಸಿದ್ದ ಮೆಕಲಮ್ ಮ್ಯಾಜಿಕ್

ಐಪಿಎಲ್ ಇತಿಹಾಸದ ಮೊದಲ ಪಂದ್ಯದಲ್ಲೇ ಹೀನಾಯವಾಗಿ ಸೋತಿದ್ದ ಆರ್ ಸಿಬಿ

ಆಗ ತಾನೇ ವಿಶ್ವ ಕ್ರಿಕೆಟ್ ಗೆ ಟಿ-ಟ್ವೆಂಟಿ ಎಂಬ ಹೊಸ ಮಾದರಿ ಪರಿಚಯವಾಗಿತ್ತು. ಕೇವಲ ಒಂದು ಅಂತಾರಾಷ್ಟ್ರೀಯಯ ಟಿ-ಟ್ವೆಂಟಿ ಪಂದ್ಯವಾಡಿದ ಅನುಭವವಿದ್ದ ಭಾರತ ತಂಡ ಚೊಚ್ಚಲ ವಿಶ್ವಕಪ್ ಗೆದ್ದು ಬೀಗಿತ್ತು. ಆದರೆ ವಿಶ್ವ ಕ್ರಿಕೆಟ್ ಗೆ ಹೊಡಿಬಡಿ ಆಟದ ನಿಜವಾದ ಅಮಲು ಹತ್ತಿಸಿದ್ದು ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ಬ್ರೆಂಡನ್ ಮೆಕಲಮ್ ಎಂಬ ಸ್ಫೋಟಕ ಆಟಗಾರ.

18 ಎಪ್ರಿಲ್ 2008 ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮರೆಯಲಾಗದ ದಿನ. ಆದರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳಿಗಂತೂ ಆ ದಿನ ನೆನಪು ಮಾಡಿಕೊಂಡರೆ ಸಾಕು ಅಷ್ಟಕ್ಕೂ ಕಾರಣ ಅವರೇ, ಕಿವೀಸ್ ಆಟಗಾರ ಬ್ರೆಂಡನ್ ಮೆಕಲಮ್.
 
ಉದ್ಘಾಟನಾ ಪಂದ್ಯದಲ್ಲಿ ಸಿಡಿದವು ಮೆಕಲಮ್ ಸಿಕ್ಸರ್ ಪಟಾಕಿ

ಐಪಿಎಲ್ ಎಂಬ ಹೊಸ ಮಾದರಿಯ ಕ್ರಿಕೆಟ್ ಭಾರತೀಯರಿಗೆ ಸರಿಯಾಗಿ ಅರ್ಥವೂ ಆಗಿರಲಿಲ್ಲ. ಒಂದೇ ತಂಡದಲ್ಲಿದ್ದವರು ಬೇರೆ ಬೇರೆ ತಂಡದ ಚುಕ್ಕಾಣಿ ಹಿಡಿದಿದ್ದರು. ಈ ಹೊಸ ಮಾದರಿಯನ್ನು ಕ್ರೀಡಾ ಪ್ರೇಮಿಗಳು ಹೇಗೆ ಸ್ವೀಕರಿಸುತ್ತಾರೆ ಎಂದು ಚಿಂತೆಗೊಂಡಿದ್ದ ಬಿಸಿಸಿಐಗೆ ಮೊದಲ ಪಂದ್ಯದ ಮೊದಲಾರ್ಧ ಮುಗಿದಾಗಲೇ ಉತ್ತರ ಸಿಕ್ಕಿತ್ತು. ಹಾಗಿತ್ತು ಅಂದಿನ ಆರ್ಭಟ.


ಮೊದಲ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ನಡುವೆ. ಆಪ್ತಮಿತ್ರರಾದ ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗೂಲಿ ಐಪಿಎಲ್ ನಲ್ಲಿ ಇತ್ತಂಡಗಳ ನಾಯಕರು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜನ ಕಿಕ್ಕಿರಿದು ಸೇರಿದ್ದರು. ಟಾಸ್ ಗೆದ್ದ ಆರ್ ಸಿಬಿ ಆಯ್ಕೆ ಮಾಡಿದ್ದು ಬೌಲಿಂಗ್. ನಂತರ ನಡೆದಿದ್ದು ಇತಿಹಾಸ !

ನಾಯಕ ಸೌರವ್ ಗಂಗೂಲಿ ಜೊತೆ ಕ್ರೀಸಿಗಿಳಿದ ಬ್ರೆಂಡನ್ ಮೆಕಲಮ್ ಹೊಡಿಬಡಿ ಆಟದ ಅಸಲಿಯತ್ತು ತೋರಿಸಿದರು. ಗಂಗೂಲಿ ಜೊತೆಗೆ ಮೊದಲ ವಿಕೆಟ್ ಗೆ 61 ರನ್ ಗಳಿಸದರು. ಇದರಲ್ಲಿ ಗಂಗೂಲಿ ಪಾಲು ಕೇವಲ 10 ರನ್. ಎರಡನೇ ವಿಕೆಟ್ ಗೆ ರಿಕಿ ಪಾಂಟಿಂಗ್ ಜೊತೆ 51 ರನ್ ಜೊತೆಯಾಟ. ಪಾಂಟಿಂಗ್ ಗಳಿಸಿದ್ದು ಇಪ್ಪತ್ತು ರನ್. 12 ರನ್ ಗಳಿಸಿದ ಡೇವಿಡ್ ಹಸ್ಸಿ ಔಟಾದಾಗ ತಂಡದ ಮೊತ್ತ 172. ಜೊತೆಯಾಟ 60 ರನ್. ಮೊಹಮ್ಮದ್ ಹಫೀಜ್ ಜೊತೆಗೆ ನಾಲ್ಕನೇ ವಿಕೆಟ್ ಗೆ 50 ರನ್ ಜೊತೆಯಾಟ. ಹಫೀಜ್ ಗಳಿಕೆ ಕೇವಲ ಐದು ರನ್. ಅಂತಿಮವಾಗಿ ಕೊಲ್ಕತ್ತಾ ತಂಡದ ಮೊತ್ತ ಮೂರು ವಿಕೆಟ್ ನಷ್ಟಕ್ಕೆ 222 ರನ್. ಅಜೆಯವಾಗುಳಿದ ಮೆಕಲಮ್ ಗಳಿಕೆ 158 ರನ್. ಅಂದರೆ ತಂಡದ ಒಟ್ಟು ಮೊತ್ತದ ಶೇಕಡಾ 70ರಷ್ಟು ಮೆಕಲಮ್ ಒಬ್ಬರ ಬ್ಯಾಟಿನಿಂದಲೇ ಹರಿದಿತ್ತು. ಅಲ್ಲಿಗೆ ಲೆಕ್ಕ ಹಾಕಿ ಮೆಕಲಮ್ ಬ್ಯಾಟಿಂಗ್ ಯಾವ ಮಟ್ಟದಲ್ಲಿತ್ತು ಎಂದು. 

ಕೇವಲ 52 ಎಸತಗಳಿಂದ ಶತಕ ಸಿಡಿಸಿದ ಬ್ರೆಂಡನ್ ಮೆಕಲಮ್, ಅಂತಿಮವಾಗಿ 73 ಎಸೆತಗಳಿಂದ 158 ರನ್ ಗಳಿಸಿದ್ದರು. 216.44 ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟ್ ಬೀಸಿದ ಈ ಬಲಗೈ ಬ್ಯಾಟ್ಸ್ ಮನ್ ಹತ್ತು ಬೌಂಡರಿ ಬಾರಿಸಿದರು. ಚಿನ್ನಸ್ವಾಮಿ ಅಂಗಳದ ಮೂಲೆ ಮೂಲೆಗೆ ಚೆಂಡನ್ನು ಅಟ್ಟಿದ ಮೆಕಲಮ್ ಬರೋಬ್ಬರಿ 13 ಸಿಕ್ಸರ್ ಸಿಡಿಸಿ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಕ್ಯಾಮರೂನ್ ವೈಟ್ ರ ಒಂದು ಓವರ್ ನಲ್ಲಿ ಬರೋಬ್ಬರಿ 24 ರನ್ ಸಿಡಿಸಿದ್ದು ಅಂದಿನ ಮೆಕಲಮ್ ಅಬ್ಬರಕ್ಕೆ ಸಾಕ್ಷಿ. ಮೊದಲ ಪಂದ್ಯದ ಒಂದು ಇನ್ನಿಂಗ್ಸ್ ಮುಗಿಯುವಷ್ಟರಲ್ಲಿ ಇಡೀ ಭಾರತಕ್ಕೆ ಐಪಿಎಲ್ ಜ್ವರ ಹಿಡಿದಾಗಿತ್ತು. 

ಕೆಕೆಆರ್ ನೀಡಿದ 223 ರನ್ ಗಳ ಬೃಹತ್ ಗುರಿ ನೋಡಿಯೇ ಬೆಂಗಳೂರು ಬ್ಯಾಟ್ಸ್ ಮನ್ ಗಳು ಸುಸ್ತಾಗಿದ್ದರು. ಮೆಕಲಮ್ ರಿಂದ ಸರಿಯಾಗಿ ಚಚ್ಚಿಸಿಕೊಂಡ ಆರ್ ಸಿಬಿ ಯಾವ ಹಂತದಲ್ಲೂ ಪ್ರತಿರೋಧ ತೋರಲಿಲ್ಲ. ತಂಡ ಕೇವಲ 15.1 ಓವರ್ ನಲ್ಲಿ 82 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಮೊದಲ ಪಂದ್ಯದಲ್ಲೇ ಹೀನಾಯ ಸೋಲಿನ ಅವಮಾನಕ್ಕೆ ತುತ್ತಾಯಿತು. 


ಆರ್ ಸಿಬಿ ಪರ ಹೈಯೆಸ್ಟ್ ಸ್ಕೋರ್ ಗಳಿಸಿದ್ದು ಹತ್ತನೇ ಕ್ರಮಾಂಕದ ಆಟಗಾರ ಪ್ರವೀಣ್ ಕುಮಾರ್. ಪ್ರವೀಣ್ ಕುಮಾರ್ ಸ್ಕೋರ್ 18 ರನ್. ಪ್ರವೀಣ್ ಕುಮಾರ್ ಬಿಟ್ಟರೆ ಬೇರೆ ಯಾವೊಬ್ಬ ಆಟಗಾರನೂ ಎರಡಂಕೆ ಮೊತ್ತ ಗಳಿಸಿರಲಿಲ್ಲ. ವಿರಾಟ್ ಕೊಹ್ಲಿ, ಜ್ಯಾಕ್ ಕ್ಯಾಲಿಸ್, ರಾಹುಲ್ ದ್ರಾವಿಡ್ ರಂತಹ ಘಟಾನುಘಟಿಗಳು ಸಂಪೂರ್ಣ ವಿಫಲಾರಾಗಿದ್ದರು. ವಿಚಿತ್ರವೇನೆಂದರೆ ಇವರಿಗಿಂತ ಹೆಚ್ಚು ರನ್ ಕೋಲ್ಕತ್ತಾ ‘ಇತರೆ’ ರೂಪದಲ್ಲಿ ನೀಡಿತ್ತು. ( 19 ಇತರೆ ರನ್- 8 ಲೆಗ್ ಬೈ, 11 ವೈಡ್).  ಇಶಾಂತ್ ಶರ್ಮಾ ಮೂರು ಓವರ್ ನಲ್ಲಿ ಕೇವಲ ಏಳು ರನ್ ನೀಡಿ ನಿಯಂತ್ರಣ ಸಾಧಿಸಿದ್ದರು. 

ಹೀಗೆ ಮೊದಲ ಪಂದ್ಯದಲ್ಲೇ ನಿರೀಕ್ಷೆಗಿಂತ ಹೆಚ್ಚು ಯಶಸ್ಸು ಕಂಡ ಐಪಿಎಲ್ ಗೆ ಈಗ 12ರ ಹರೆಯ. ವರ್ಷಕ್ಕಿಂತ ವರ್ಷ ವಿಭಿನ್ನವಾಗಿ, ವಿಶಿಷ್ಟವಾಗಿ ಮನೋರಂಜನೆ ನೀಡುತ್ತಿರುವ ಐಪಿಎಲ್ ಮತ್ತೆ ಬಂದಿದೆ. ಕೊಹ್ಲಿ, ಡಿ’ವಿಲಿಯರ್ಸ್, ಗೇಲ್, ಧೋನಿ, ಪಂತ್, ರಶೀದ್ ಖಾನ್, ಭುವನೇಶ್ವರ್ ಮುಂತಾದವರ ಮ್ಯಾಜಿಕ್ ಈ ವರ್ಷವೂ ಹೇಗೆ ನಡೆಯುತ್ತದೆ ಎಂದು ನೋಡಲು ಜನ ಕಾತರರಾಗಿದ್ದಾರೆ.  

ಕೀರ್ತನ್ ಶೆಟ್ಟಿ ಬೋಳ


ಇಂದು ಹೆಚ್ಚು ಓದಿದ್ದು

Trending videos

Back to Top