CONNECT WITH US  

ಈಡನ್‌ನಲ್ಲಿ ಕೆಕೆಆರ್‌-ಹೈದರಾಬಾದ್‌ ಮೇಲಾಟ

ಕೋಲ್ಕತಾ: ರವಿವಾರದ ಮೊದಲ ಐಪಿಎಲ್‌ ಪಂದ್ಯದಲ್ಲಿ ಕೋಲ್ಕತಾ ನೈಟ್‌ರೈಡರ್ ಮತ್ತು ರನ್ನರ್ ಅಪ್‌ ಸನ್‌ರೈಸರ್ ಹೈದರಾಬಾದ್‌ ಮುಖಾಮುಖೀಯಾಗಲಿವೆ. ಮೇಲ್ನೋಟಕ್ಕೆ ಎರಡೂ ಸಮಬಲದ ತಂಡಗಳಾಗಿ ಗೋಚರಿಸುತ್ತಿದ್ದರೂ ಇದು "ಈಡನ್‌ ಗಾರ್ಡನ್ಸ್‌' ಮೇಲಾಟವಾದ್ದರಿಂದ ಕೆಕೆಆರ್‌ ಒಂದು ಹೆಜ್ಜೆ ಮುಂದೆ ಎನ್ನಲಡ್ಡಿಯಿಲ್ಲ. ಕಳೆದ ವರ್ಷ 2ನೇ ಎಲಿಮಿನೇಟರ್‌ ಪಂದ್ಯದಲ್ಲಿ ಹೈದರಾಬಾದ್‌ಗೆ ಶರಣಾಗಿ ಕೂಟದಿಂದ ಹೊರಬಿದ್ದ ಕೆಕೆಆರ್‌ ಪಾಲಿಗೆ ಇದು ಸೇಡಿನ ಪಂದ್ಯವೂ ಆಗಿದೆ.

ಒಟ್ಟು 124 ವಿಕೆಟ್‌ ಪತನಕ್ಕೆ ಕಾರಣರಾಗಿ, ಐಪಿಎಲ್‌ನ ಯಶಸ್ವೀ ಕೀಪರ್‌ ಎನಿಸಿರುವ ದಿನೇಶ್‌ ಕಾರ್ತಿಕ್‌ ಸಾರಥ್ಯದಲ್ಲಿ ಕೆಕೆಆರ್‌ ಕಣಕ್ಕಿಳಿಯಲಿದೆ. ವೈಯಕ್ತಿಕವಾಗಿ ಈ ಸರಣಿ ಕಾರ್ತಿಕ್‌ಗೆ ಹೆಚ್ಚು ಮಹತ್ವದ್ದಾಗಿದೆ. ಕಾರಣ, ಏಕದಿನ ವಿಶ್ವಕಪ್‌. ಈಗಾಗಲೇ ವಿಶ್ವಕಪ್‌ ರೇಸ್‌ನಿಂದ ಬಹುತೇಕ ಹೊರಗುಳಿದರೂ ಇವರ "ಫಿನಿಶಿಂಗ್‌ ಟೆಕ್ನಿಕ್‌' ಇಲ್ಲಿ ಗಣನೆಗೆ ಬರಬಹುದು.

ಕೆಕೆಆರ್‌ನಲ್ಲಿ ಕೆರಿಬಿಯನ್ನರು
ಕೆಕೆಆರ್‌ ಕೆರಿಬಿಯನ್‌ ಆಟಗಾರರನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿದೆ. ಆರಂಭಿಕನಾಗಿಯೂ ಕ್ಲಿಕ್‌ ಆಗಿರುವ ಲೆಗ್ಗಿ ಸುನೀಲ್‌ ನಾರಾಯಣ್‌, ಕಾರ್ಲೋಸ್‌ ಬ್ರಾತ್‌ವೇಟ್‌, ಆ್ಯಂಡ್ರೆ ರಸೆಲ್‌ ಅವರ ಜತೆಗೆ ಕಾಂಗರೂ ನಾಡಿನ ಕ್ರಿಸ್‌ ಲಿನ್‌ ಬ್ಯಾಟಿಂಗ್‌ "ಫೈರ್‌ ಪವರ್‌' ಹೊಂದಿದ್ದಾರೆ. ಉತ್ತಪ್ಪ, ಗಿಲ್‌, ರಾಣ, ಕುಲದೀಪ್‌ ಅವರೆಲ್ಲ ತವರಿನ ಹೀರೋಗಳು.

ವಾರ್ನರ್‌ ಜತೆಗಾರ ಯಾರು?
ಹೈದರಾಬಾದ್‌ಗೆ ಈ ಬಾರಿ ಧವನ್‌ ನೆರವಿಲ್ಲ. ವಾರ್ನರ್‌ ಜತೆಗಾರ ಯಾರೆಂಬುದೊಂದು ಕುತೂಹಲ. ನಾಯಕ ವಿಲಿಯಮ್ಸನ್‌, ಪಾಂಡೆ, ಸಾಹಾ, ಆಲ್‌ರೌಂಡರ್‌ಗಳಾದ ಶಕಿಬ್‌, ವಿಜಯ್‌ ಶಂಕರ್‌, ಯೂಸುಫ್ ಪಠಾಣ್‌ ಬ್ಯಾಟಿಂಗ್‌ ಸರದಿಯ ಪ್ರಮುಖರು. ಆದರೆ ಬೌಲಿಂಗ್‌ ವಿಭಾಗ ಹೆಚ್ಚು ಬಲಿಷ್ಠ. ರಶೀದ್‌ ಖಾನ್‌, ಭುವನೇಶ್ವರ್‌ ಅಪಾಯಕಾರಿಗಳಾಗಬಲ್ಲರು.


ಇಂದು ಹೆಚ್ಚು ಓದಿದ್ದು

Trending videos

Back to Top