CONNECT WITH US  

“ಆ” ಸಿನಿಮಾ ರೀಲ್ ಗೆ ಬೆಂಕಿ ಹಚ್ಚಿದ ಪರಿಣಾಮ ಸಂಜಯ್ ಗಾಂಧಿ ಜೈಲುಪಾಲು!

ಇಂದಿರಾ, ಸಂಜಯ್ ಗಾಂಧಿ ಕಥಾ ಹಂದರದ KKK ಸಿನಿಮಾದ ಮೇಲೆ...

ಚಿತ್ರರಂಗಕ್ಕೂ ರಾಜಕೀಯಕ್ಕೂ ಅವಿನಾಭಾವ ಸಂಬಂಧ. ಬಾಲಿವುಡ್, ಟಾಲಿವುಡ್, ಮಾಲಿವುಡ್ ಸೇರಿದಂತೆ ಕನ್ನಡ ಚಿತ್ರರಂಗ ಕೂಡಾ ರಾಜಕೀಯ ಚಟುವಟಿಕೆ ಜೊತೆ ನಿಕಟವಾಗಿದೆ. ರೀಲ್ ನಲ್ಲಿ ನಟಿಸುತ್ತಿದ್ದವರು ರಿಯಲ್ ಲೈಫ್ ನಲ್ಲೂ ಚುನಾವಣೆಯಲ್ಲಿ ನಿಂತು ಗೆಲುವು ಸಾಧಿಸಿದ ಹಲವಾರು ನಟ, ನಟಿಯರು ಇದ್ದಾರೆ. ಆದರೆ ಇವೆಲ್ಲಕ್ಕಿಂತ ಹೆಚ್ಚಾಗಿ ರಾಜಕೀಯ ದ್ವೇಷದಿಂದಾಗಿ ಚಿತ್ರನಟರು ಅನುಭವಿಸಿದ ಕಿರುಕುಳ, ಮಾನಸಿಕ ಹಿಂಸೆ, ಸಿನಿಮಾಗಳ ನಿಷೇಧಕ್ಕೆ ದೊಡ್ಡ ಇತಿಹಾಸವೇ ಇದೆ. ಸ್ವಾತಂತ್ರ್ಯ ಪೂರ್ವದಲ್ಲಿ (1939) ಮೋಹನ್ ಭವನಾನಿ ಅವರ ಮಿಲ್ ಎಂಬ ಚಿತ್ರವನ್ನೂ ಕೂಡಾ ನಿಷೇಧಕ್ಕೊಳಪಡಿಸಲಾಗಿತ್ತು. ಕಾರ್ಖಾನೆ ಮಾಲೀಕ ಹಾಗೂ ಕಾರ್ಮಿಕರ ನಡುವಿನ ತಿಕ್ಕಾಟದ ಕಥಾ ಹಂದರ ಸಿನಿಮಾದಲ್ಲಿತ್ತು!

ಈಗಲೂ ಕೂಡಾ ಅಂತಹ ಘಟನೆಗಳು ಮುಂದುವರಿದಿದೆ. ಆದರೆ ಸ್ವಾತಂತ್ರ್ಯ ನಂತರದ ಚಿತ್ರರಂಗದಲ್ಲಿ ರಾಜಕೀಯ ಕಾರಣಕ್ಕಾಗಿ ಅತೀ ಹೆಚ್ಚು ವಿವಾದಕ್ಕೊಳಗಾದ, ಬಿಡುಗಡೆಗೆ ಮುನ್ನವೇ ಸಿನಿಮಾದ ರೀಲ್ ಅನ್ನೇ ಸುಟ್ಟು ಹಾಕಿದ್ದ ಚಿತ್ರ ಕೆಕೆಕೆ(ಕಿಸ್ಸಾ ಕುರ್ಸಿ ಕಾ) ಎಂಬ ಬಾಲಿವುಡ್ ಸಿನಿಮಾ ಎಂಬುದು ಯುವಪೀಳಿಗೆಯ ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ.

ಯುಆರ್ ಅನಂತ್ ಮೂರ್ತಿ ಅವರ ಸಂಸ್ಕಾರ ಸಿನಿಮಾ ಬಿಡುಗಡೆಗಾಗಿ ಒಂದು ವರ್ಷಕ್ಕೂ ಹೆಚ್ಚು ಕಾಲ ಸೆನ್ಸಾರ್ ಮಂಡಳಿಯಲ್ಲಿ ಕಾದಿತ್ತು. ಮಾಸ್ಟರ್ ಪೀಸ್ ಸಿನಿಮಾ ಅಂಬಿ ಅಭಿನಯದ ಅಂತ ಸಿನಿಮಾ ಬಿಡುಗಡೆಗೆ ಅದೆಷ್ಟು ಅಡೆತಡೆಯಾಗಿದ್ದವು, ಆಂಧಿ, ಬಾಲಿವುಡ್ ನ ಚೇತ್ನಾ, ಬ್ಯಾಂಡಿಡ್ ಕ್ವೀನ್, ಡರ್ಟಿ ಪಿಕ್ಚರ್, ವಿಧವೆಯರ ಕಥಾಹಂದರದ ವಾಟರ್ ಸಿನಿಮಾ, ಬಿಆರ್ ಛೋಪ್ರಾ ಅವರ ಇನ್ ಸಾಫ್ ಕಾ ತರಾಜು, ಫೈರ್, ವಿಶ್ವರೂಪಂ ಹೀಗೆ ಹಲವು ಸಿನಿಮಾಗಳು ನಿಷೇಧಕ್ಕೆ ಹಾಗೂ ಕೋರ್ಟ್ ತಡೆಯಾಜ್ಞೆಗೊಳಗಾಗಿ, ಸೆನ್ಸಾರ್ ಬೋರ್ಡ್ ಕತ್ತರಿ ಪ್ರಯೋಗದ ಬಳಿಕ ಬಿಡುಗಡೆ ಕಂಡಿದ್ದವು!. ಆದರೆ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಿರ್ಮಾಣವಾಗಿದ್ದ ಕಿಸ್ಸಾ ಕುರ್ಸಿ ಕಾ ಸಿನಿಮಾ ಬಿಡುಗಡೆಯಾಗುವ ಹೊತ್ತಲ್ಲಿ ಏನಾಯ್ತು ಎಂಬುದನ್ನು ನೀವು ತಿಳಿದುಕೊಳ್ಳಬೇಕು…ಅದು ಮತ್ತೊಂದು ಕರಾಳ ಇತಿಹಾಸದ ಮುಖ ನಿಮಗೆ ಪರಿಚಯಿಸಲಿದೆ!

ತುರ್ತು ಪರಿಸ್ಥಿತಿ ಕಾಲ ಹೇಗಿತ್ತು ಎಂಬ ಬಗ್ಗೆ ಹಲವು ಮಾಹಿತಿ, ಸಾವಿರಾರು ಲೇಖನ, ಪುಸ್ತಕಗಳು ಲಭ್ಯವಿದೆ. ತುರ್ತು ಪರಿಸ್ಥಿತಿ ವೇಳೆ ಆಲ್ ಇಂಡಿಯಾ ರೇಡಿಯೋದಲ್ಲಿಯೂ ಕೂಡಾ ಎಮರ್ಜೆನ್ಸಿ ಸಂದರ್ಭದಲ್ಲಿ ನಡೆದ ದುರಂತಗಳ ಬಗ್ಗೆ ಯಾವುದೇ ವರದಿ ಪ್ರಸಾರವಾಗದಂತೆ ಕಾಂಗ್ರೆಸ್ ತಡೆದುಬಿಟ್ಟಿತ್ತು. ಅಷ್ಟೇ ಅಲ್ಲ ಲಕ್ಷಾಂತರ ಪುರುಷರಿಗೆ ಬಲವಂತದಿಂದ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಪತ್ರಿಕೆ, ರೇಡಿಯೋ ಹಾಗೂ ಸಿನಿಮಾ ನಿಷೇಧಿಸಲಾಗಿತ್ತು. ರಾಜಕೀಯ ನಾಯಕರನ್ನು ಕಾರಾಗೃಹಕ್ಕೆ ತಳ್ಳಲಾಗಿತ್ತು..ಇದು ತುರ್ತು ಪರಿಸ್ಥಿತಿ ಸಂದರ್ಭದ ಕಿರು ಚಿತ್ರಣ…

ಇಂದಿರಾ, ಸಂಜಯ್ ಗಾಂಧಿ ಕಥಾ ಹಂದರದ ಸಿನಿಮಾದ ಮೇಲೆ ಗದಾಪ್ರಹಾರ!

ಮೂರು ಬಾರಿ ಲೋಕಸಭಾ ಸಂಸದರಾಗಿದ್ದ ಜನತಾ ಪಕ್ಷದ ಅಮೃತ್ ನಹಾಟಾ ಅವರು ಕಿಸ್ಸಾ ಕುರ್ಸಿ ಕಾ ಎಂಬ ಸಿನಿಮಾ ನಿರ್ದೇಶಿಸಿದ್ದರು. ಅಧಿಕಾರ ದಾಹ, ಭ್ರಷ್ಟಾಚಾರ ಕಥಾ ಹಂದರದ ಸಿನಿಮಾವನ್ನು ಅಂದು ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ತುರ್ತು ಪರಿಸ್ಥಿತಿ ಕಾಲದಲ್ಲಿ ಬಿಡುಗಡೆ ಮಾಡದಂತೆ 1977ರಲ್ಲಿ ನಿಷೇಧ ಹೇರಿಬಿಟ್ಟಿತ್ತು. ಈ ಸಿನಿಮಾ ನಿರ್ಮಾಣವಾಗಿ, 1975ರಲ್ಲಿಯೇ ಸರ್ಟಿಫಿಕೇಶನ್ ಗಾಗಿ ಸಿನಿಮಾ ಸೆನ್ಸಾರ್ ಮಂಡಳಿ ಮುಂದೆ ಹೋಗಿತ್ತು. ಆಗ ಕಾಂಗ್ರೆಸ್ ಹಾಗೂ ಇಂದಿರಾ ಗಾಂಧಿಯ ಕಟ್ಟಾ ಬೆಂಬಲಿಗರಾಗಿದ್ದ ಸ್ವಾಮಿ ಧೀರೇಂದ್ರ ಬ್ರಹ್ಮಾಚಾರಿ, ಇಂದಿರಾ ಗಾಂಧಿಯ ಖಾಸಗಿ ಕಾರ್ಯದರ್ಶಿ ಆರ್ ಕೆ ಧವನ್ ಹಾಗೂ ರುಕ್ಸಾನಾ ಸುಲ್ತಾನಾ ಅವರು ಸಿನಿಮಾದ ಬಗ್ಗೆ ಸುಳ್ಳು ಮಾಹಿತಿ ನೀಡಿಬಿಟ್ಟಿದ್ದರು. ತದನಂತರ ಸಿನಿಮಾದ ಪುನರ್ ಪರಿಶೀಲನೆಗಾಗಿ ಏಳು ಸದಸ್ಯರನ್ನೊಳಗೊಂಡ ಸಮಿತಿಗೆ ಶಿಫಾರಸು ಮಾಡಿತ್ತು!

ಪುನರ್ ಪರಿಶೀಲನಾ ಸಮಿತಿ ಕೂಡಾ 1975ರ ಮೇ 1ರಂದು ಬಾಂಬೆ ಅಕಾಡೆಮಿಯ ಟಾಕೀಸ್ ನಲ್ಲಿ ಕಿಸ್ಸಾ ಕುರ್ಸಿ ಕಾ ಸಿನಿಮಾವನ್ನು ವೀಕ್ಷಿಸಿ ಏಳು ಮಂದಿಯಲ್ಲಿ ಆರು ಸದಸ್ಯರು ಕೆಲವೊಂದು ಭಾಗಕ್ಕೆ ಕತ್ತರಿ ಹಾಕಬೇಕೆಂಬ ಷರತ್ತಿನ ಮೇಲೆ ಯು ಸರ್ಟಿಫಿಕೇಟ್ ನೀಡಲು ಅನುಮತಿ ನೀಡಿದ್ದರು. ಬಳಿ ಸಮಿತಿ ಸಿನಿಮಾ ಬಿಡುಗಡೆ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಬೇಕೆಂದು ಸೆನ್ಸಾರ್ ಮಂಡಳಿ ಪ್ರಭಾರ ಅಧ್ಯಕ್ಷ ವಿಡಿ ವ್ಯಾಸ್ ಶಿಫಾರಸು ಮಾಡಿದ್ದರು!

ಏತನ್ಮಧ್ಯೆ ತನ್ನ ಸಿನಿಮಾ ಬಿಡುಗಡೆ ವಿಳಂಬವಾಗುತ್ತಿದ್ದು ಕೂಡಲೇ ಬಿಡುಗಡೆಗೆ ಅನುಮತಿ ನೀಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ನಿರ್ಮಾಪಕಿ ನಹಟಾ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಅಷ್ಟರಲ್ಲಿ ಕೇಂದ್ರ ಮಾಹಿತಿ ಸಚಿವಾಲಯ 1975ರ ಜೂನ್ 18ರಂದು ಕೆಕೆಕೆ ಸಿನಿಮಾಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸಿನಿಮಾಟೋಗ್ರಾಫ್ ಕಾಯ್ದೆ ಪ್ರಕಾರ ಪರಿಶೀಲನೆ ನಡೆಸುತ್ತಿದೆ ಎಂದು ಆದೇಶವನ್ನು ಹೊರಡಿಸಿಬಿಟ್ಟಿತ್ತು. ಅಲ್ಲದೇ ಜಂಟಿ ಕಾರ್ಯದರ್ಶಿ ಮುರ್ಶಿದ್ ಅವರು 51 ಆಕ್ಷೇಪಣೆಯೊಂದಿಗೆ ನಹಟಾ ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದರು.

ನಿರ್ದೇಶಕಿ ನಹಟಾ ಅವರು ನೀಡಿದ್ದ ಉತ್ತರದಲ್ಲಿ, ನಮ್ಮ ಸಿನಿಮಾದಲ್ಲಿರುವ ಚಿತ್ರಣ ಕಾಲ್ಪನಿಕವಾದದ್ದು. ನಾವು ಯಾವುದೇ ಪಕ್ಷ ಅಥವಾ ವ್ಯಕ್ತಿಯನ್ನು ಗುರಿಯಾಗಿಟ್ಟುಕೊಂಡು ಸಿನಿಮಾ ನಿರ್ಮಿಸಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೆ ಅಷ್ಟೊತ್ತಿಗಾಗಲೇ ದೇಶದಲ್ಲಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿಬಿಟ್ಟಾಗಿತ್ತು!

ಕೆಕೆಕೆ ಸಿನಿಮಾದ ಬಿಕ್ಕಟ್ಟು ಜಟಿಲವಾಗುತ್ತಿರುವ ನಡುವೆಯೇ 1975ರ ಜುಲೈ 7ರಂದು ವಿಸಿ ಶುಕ್ಲಾ ನೇತೃತ್ವದಲ್ಲಿ ಸೀಕ್ರೆಟ್ ಕೋ ಆರ್ಡಿನೇಶನ್ ಸಮಿತಿ ಸಭೆ ಕರೆದು, ಸಿನಿಮಾದ ಒರಿಜಿನಲ್ ನೆಗೇಟಿವ್ಸ್ ಅನ್ನು ವಶಪಡಿಸಿಕೊಳ್ಳುವಂತೆ ಆದೇಶ ಹೊರಡಿಸಿದ್ದರು. ಜುಲೈ 11ರಂದು ನಹಟಾ ಅವರು ಆಕ್ಷೇಪಣೆಗೆ ಉತ್ತರ ನೀಡಿದ್ದ ಬೆನ್ನಲ್ಲೇ ಜಂಟಿ ಕಾರ್ಯದರ್ಶಿ ಮುರ್ಶಿದ್ ಅವರು, ದೇಶದ ಹಿತಾಸಕ್ತಿ ಮತ್ತು ಭದ್ರತೆ ದೃಷ್ಟಿಯಿಂದ ಕಿಸ್ಸಾ ಕುರ್ಸಿ ಕಾ ಸಿನಿಮಾದ ಸಾರ್ವಜನಿಕ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಆದೇಶಿಸಿದ್ದರು!

ತನ್ನ ಸಿನಿಮಾ ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಹಟಾ ಅವರು ಮತ್ತೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಸಿನಿಮಾ ನೆಗೆಟೀವ್ಸ್ ವಶಪಡಿಸಿಕೊಳ್ಳದಂತೆ ತಡೆ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ವಜಾಗೊಳಿಸಿ, ಕೆಕೆಕೆ ಸಿನಿಮಾದ ನೆಗೆಟೀವ್ಸ್ ಹಾಗೂ ಸಿನಿಮಾ ಪ್ರಿಂಟ್ ಅನ್ನು ಕೇಂದ್ರ ಸರ್ಕಾರ ಬಾಂಬೆ ಫಿಲ್ಮ್ ಲಾಬೋರೇಟರಿಯಲ್ಲಿ ರಕ್ಷಿಸಿ ಇಡಬೇಕೆಂದು ನಿರ್ದೇಶನ ನೀಡಿತ್ತು.

ಪೊಲೀಸರಿಂದ ಸಿನಿಮಾದ ರೀಲ್ ವಶ!

1975ರ ಆಗಸ್ಟ್ 1ರಂದು ಬಾಂಬೆ ಪೊಲೀಸರು ಕೆಕೆಕೆ ಸಿನಿಮಾಕ್ಕೆ ಸಂಬಂಧಿಸಿದ 13 ಸ್ಟೀಲ್ ಟ್ರಂಕ್ ಗಳಲ್ಲಿ ಮೆಟಿರಿಯಲ್ಸ್ ಹಾಗೂ 241 ರೀಲ್ ಗಳನ್ನು ವಶಪಡಿಸಿಕೊಂಡು ಸೆನ್ಸಾರ್ ಮಂಡಳಿಗೆ ಹಸ್ತಾಂತರಿಸಿಬಿಟ್ಟಿದ್ದರು!

ಸೆನ್ಸಾರ್ ಮಂಡಳಿಯಲ್ಲಿದ್ದ ಸಿನಿಮಾ ಪ್ರಿಂಟ್ ಅನ್ನೇ ಹೊತ್ತೊಯ್ದು ಬೆಂಕಿ ಹಚ್ಚಿದ್ದರು!

ಯಾವುದೇ ಕಾರಣಕ್ಕೂ ಸಿನಿಮಾ ಪ್ರದರ್ಶನ ಕಾಣಬಾರದು ಎಂಬ ಹಠಕ್ಕೆ ಬಿದ್ದಿದ್ದ ಸಂಜಯ್ ಗಾಂಧಿ ತನ್ನ ಪಟಾಲಂಗೆ ಫರ್ಮಾನು ಹೊರಡಿಸಿಬಿಟ್ಟಿದ್ದರು..ಅದರಂತೆ ಸೆನ್ಸಾರ್ ಮಂಡಳಿಯಲ್ಲಿದ್ದ ಕಿಸ್ಸಾ ಕುರ್ಸಿ ಕಾ ಸಿನಿಮಾದ ಮಾಸ್ಟರ್ ಪ್ರಿಂಟ್, ಸ್ಟಿಲ್ಸ್ ಅನ್ನು 13 ಸ್ಟೀಲ್ ಟ್ರಂಕ್ ಗಳಲ್ಲಿ ತುಂಬಿಸಿಕೊಂಡು ಮಾಹಿತಿ ಸಚಿವಾಲಯದ ಅಧಿಕಾರಿಗಳ ನಿರ್ದೇಶನದ ಮೇರೆಗೆ ನವದೆಹಲಿ ರೈಲ್ವೆ ಸ್ಟೇಷನ್ ಗೆ ತಂದಿದ್ದರು. ಅಲ್ಲಿಂದ ಘೋಷ್ ಅವರು ತನ್ನ ಕಾರಿನಲ್ಲಿ ಸಫ್ದರ್ ಜಂಗ್ ರಸ್ತೆಗೆ, ಕೊನೆಗೆ ನವದೆಹಲಿಯಿಂದ ಬಾಂಬೆಗೆ ಬಂದಿತ್ತು.  ತದನಂತರ ಎರಡು ಮಾರುತಿ ಕಾರಿನಲ್ಲಿ ಸಿನಿಮಾದ ರೀಲ್, ಮೆಟಿರಿಯಲ್ ತುಂಬಿಸಿಕೊಂಡು ಗುರ್ಗಾಂವ್ ನಲ್ಲಿರುವ ಮಾರುತಿ ಫ್ಯಾಕ್ಟರಿಗೆ ತಂದು ಬೆಂಕಿ ಹಚ್ಚಿ ಸುಟ್ಟು ಬಿಟ್ಟಿದ್ದರು.

ಕೆಕೆಕೆ ಸಿನಿಮಾ ರೀಲ್ ಸುಟ್ಟ ಕೇಸ್ ನಲ್ಲಿ ಸಂಜಯ್ ಗಾಂಧಿ ಜೈಲುಪಾಲು!
ಕಿಸ್ಸಾ ಕುರ್ಸಿ ಕಾ ಸಿನಿಮಾ ರೀಲ್ ಸುಟ್ಟ ಪ್ರಕರಣ ಕೋರ್ಟ್ ನಲ್ಲಿ ಸುಮಾರು 11 ತಿಂಗಳ ಕಾಲ ಕಾನೂನು ಸಮರ ನಡೆದಿತ್ತು. ಪ್ರಕರಣದಲ್ಲಿ ಸಂಜಯ್ ಗಾಂಧಿ ಹಾಗೂ ಅಂದಿನ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ವಿಸಿ ಶುಕ್ಲಾ ದೋಷಿ ಎಂದು ಕೋರ್ಟ್ ತೀರ್ಪು ನೀಡಿ ಎರಡು ವರ್ಷಗಳ ಜೈಲುಶಿಕ್ಷೆ ವಿಧಿಸಿತ್ತು. ಇದರಿಂದಾಗಿ ಪ್ರಭಾವಿ ಮುಖಂಡ ಎನ್ನಿಸಿಕೊಂಡಿದ್ದ ಸಂಜಯ್ ಗಾಂಧಿ ತೀಸ್ ಹಜಾರಿ ಜೈಲಿನಲ್ಲಿ ಕಾಲ ಕಳೆಯುವಂತಾಗಿತ್ತು. ಆದರೆ ಸಂಜಯ್, ಇಂದಿರಾ ಪಟಾಲಂ ಸಾಕ್ಷಿಗಳನ್ನು ಬೆದರಿಸುವ ಮೂಲಕ ಹಾಗೂ ಚಿತ್ರದ ನಿರ್ಮಾಪಕಿ ನಹಟಾ ಅವರೇ 1976ರ ಜುಲೈ 30ರಂದು ದೂರನ್ನು ವಾಪಸ್ ಪಡೆದು ಬಿಟ್ಟಿದ್ದರು! ಅಂತೂ ಆ ಸಿನಿಮಾವನ್ನು ಮರು ನಿರ್ಮಾಣ ಮಾಡಿ 1978ರಲ್ಲಿ ಬಿಡುಗಡೆ ಮಾಡಲಾಯ್ತು!


ಇಂದು ಹೆಚ್ಚು ಓದಿದ್ದು

Trending videos

Back to Top