CONNECT WITH US  

ಅಂದು ಅಜ್ಜೀಮನೆ ಇಂದು ಬೇಸಿಗೆ ಶಿಬಿರ

ಸಾಂದರ್ಭಿಕ ಚಿತ್ರ

ಹತ್ತು ದಿನಗಳ ಹಿಂದೆ ಪತ್ರಿಕೆ ನೋಡುತ್ತಾ ಕುಳಿತಿದ್ದೆ. ಆ ಸ್ಥಳೀಯ ಪತ್ರಿಕೆಯಲ್ಲಿ ಬರೀ ಬೇಸಿಗೆ ಶಿಬಿರದ ಜಾಹೀರಾತುಗಳೇ ತುಂಬಿದ್ದವು. "ಬೇಸಿಗೆ ರಜದ ಮಜಾ ಅನುಭವಿಸಿ' ಎನ್ನುವುದೇ ಎಲ್ಲ ಜಾಹೀರಾತುಗಳ ಉದ್ಘೋಷಣೆಗಳಾಗಿದ್ದವು. ನಮ್ಮ ಕಾಲದಲ್ಲಿ ಇವುಗಳೆಲ್ಲ ಇರಲಿಲ್ಲವಲ್ಲ ಎನ್ನಿಸಿತು.

ಬೇಸಿಗೆ ರಜಕ್ಕಾಗಿ ಕಾದು ಕುಳಿತಿರುತ್ತಿದ್ದ ನಮಗೆ ರಜೆ ಸಿಕ್ಕೊಡನೆ ಮಜವೋ ಮಜಾ ! ಬೆಳಿಗ್ಗೆ ಹನ್ನೊಂದು ಗಂಟೆಯ ಒಳಗೆ ಊಟಮುಗಿಸಿ, ಹೊಳೆಗೆ ಬಟ್ಟೆ ಒಗೆಯಲು ಗೆಳತಿಯ ಜೊತೆ ಹೋಗಿ, ಅವಳು ಬಟ್ಟೆ ಒಗೆಯುವವರೆಗೂ ಹರಟುತ್ತ ಕೂರುವುದು, ಮಧ್ಯಾಹ್ನ ಮರಕ್ಕೆ ಉಯ್ನಾಲೆ ಕಟ್ಟಿಸಿಕೊಂಡು ಆಡುವುದು, ಕಥೆ-ಕಾದಂಬರಿ ಓದುವುದು (ನಾನು, ನನ್ನ ಅಕ್ಕ ಆರನೆಯ ತರಗತಿಯಿಂದಲೇ ಕಾದಂಬರಿ ಓದುತ್ತಿದ್ದೆವು), ಅಮ್ಮ-ಅಕ್ಕ, ಗೆಳತಿಯರ ಜೊತೆ ಕಲ್ಲಾಟ, ಚೌಕಾಭಾರ, ಅಟುಗುಳಿಮನೆ ಆಡುವುದು- ಇತ್ಯಾದಿ. ಸಾಯಂಕಾಲ ಆಟ-ಆಟ-ಆಟ. ಕಣ್ಣುಮುಚ್ಚಾಲೆ, ಕುಂಟಾಟ, ಡಬ್ಟಾ ವನ್‌-ಟು-ತ್ರಿ, ಗೋಲ್ಡ್‌ ಪ್ಲೇ, ಗುಲ್ಟೋರೊ- ಒಂದೇ ಎರಡೇ ನಾವು ಆಡುತ್ತಿದ್ದ ಆಟಗಳು? ಈ ಮಧ್ಯೆ ಟೂರಿಂಗ್‌ ಟಾಕೀಸ್‌ನಲ್ಲಿ ಒಳ್ಳೆಯ ಸಿನಿಮಾ ಬಂದರೆ ಅದನ್ನು ನೋಡುತ್ತಿದ್ದೆವು. ಆಗೆಲ್ಲ ನಮಗೆ ಒಂದೂ ಮುಕ್ಕಾಲು ತಿಂಗಳು ರಜೆ ಸಿಗುತ್ತಿತ್ತು. ರಜೆಯ ಅವಧಿಯಲ್ಲಿ ನಾವೂ ಮೈಸೂರಿನಲ್ಲಿದ್ದ ಸೋದರ‌ತ್ತೆ ಮನೆಗೋ, ಬೆಂಗಳೂರಿನಲ್ಲಿದ್ದ ಅಜ್ಜೀಮನೆಗೋ ಹೋಗುತ್ತಿದ್ದೆವು. ಒಮ್ಮೊಮ್ಮೆ ನಂಜನಗೂಡಿನಲ್ಲಿದ್ದ ದೊಡ್ಡಮ್ಮನ ಮನೆಗೂ ಹೋಗುತ್ತಿ¨ªೆವು. ಬೆಂಗಳೂರಿನಲ್ಲಿ ಚಿಕ್ಕಮ್ಮಂದಿರ ಒಡನಾಟ, ಅವರು ಹೇಳುತ್ತಿದ್ದ ಕಥೆಗಳು, ಮಾವಿನಮರದ ಕೆಳಗೆ ಅವರು ಹಾಕುತ್ತಿದ್ದ ಕೈತುತ್ತು ಮನಸ್ಸಿಗೆ ಮುದ ತರುತ್ತಿತ್ತು. ಮೈಸೂರಿನ ನಮ್ಮ ಸೋದರತ್ತೆ ನಮ್ಮನ್ನು ತುಂಬಾ ಸುತ್ತಾಡಿಸುತ್ತಿದ್ದರು.

ಆಗೆಲ್ಲ ರೇಡಿಯೋ ನಮಗೆ ಅಪರೂಪದ ವಸ್ತುವಾಗಿತ್ತು. ಟಿ.ವಿ. ಯ ಹೆಸರೇ ಕೇಳಿರಲಿಲ್ಲ. ಆದರೂ ನಮಗೆ ಬೇಸರ ಎನ್ನಿಸುತ್ತಿರಲಿಲ್ಲ. ರಾತ್ರಿಯ ಹೊತ್ತು ಮನೆಯ ಮುಂದೆ ಚಾಪೆ ಹಾಕಿಕೊಂಡು ನಮ್ಮ ಪಕ್ಕದ ಮನೆಯವರ ಜೊತೆ ಹರಟುತ್ತಿದ್ದೆವು. ಮನೆಗಳಿಂದ ಹೊರಗೆ ಬರುತ್ತಿದ್ದ ಖಾರಾಪುರಿ, ಹಪ್ಪಳ-ಸಂಡಿಗೆ, ಹುರಿಗಾಳು, ಸಾಂತಾಣಿ ನಮ್ಮ ಹರಟೆಯ ಮಜಾ ಹೆಚ್ಚಿಸುತ್ತಿದ್ದವು. ನಡುನಡುವೆ ನಾವು ಜಗಳವಾಡುವುದೂ, ದೊಡ್ಡವರು ಜಗಳ ಬಿಡಿಸುವುದೂ ನಡೆಯುತ್ತಿತ್ತು. 

ವಾರದ ಹಿಂದೆ ನನ್ನ ತಮ್ಮನ ಮಗಳು ರಂಜಿತಾ ಅಮೆರಿಕದಿಂದ ಕರೆಮಾಡಿ, ""ಅತ್ತೆ, ನಮ್ಮ ಬಾಲ್ಯ ಎಷ್ಟು ಚೆನ್ನಾಗಿತ್ತಲ್ವಾ? ರಜದಲ್ಲಿ ಮಕ್ಕಳೆಲ್ಲ ಒಟ್ಟಿಗೆ ಸೇರಿ¤ದ್ವಿ. ಅದೆಷ್ಟು ಆಟ ಆಡ್ತಿದ್ವಿ! ಆ ತರಹ ಆಟ-ಪಾಠಗಳೆಲ್ಲ ನಮ್ಮ ಜನರೇಷನ್‌ಗೆà ಕೊನೆಯಾಯೆನೋ?'' ಎಂದಳು.

ರಂಜಿತಾ ಹೇಳಿದ್ದು ನಿಜ. ನಾವಾಗ ಮೈಸೂರಿನ ಗೀತಾ ರಸ್ತೆಯ ದೊಡ್ಡಮನೆ ಯಲ್ಲಿ¨ªೆವು. ರಜೆ ಬಂದ ಕೂಡಲೇ ರಂಜಿತಾಳ ದೊಡ್ಡಮ್ಮ ಮಕ್ಕಳೊಡನೆ ಮೈಸೂರಿಗೆ ಬರುತ್ತಿದ್ದರು. ನನ್ನ ಅಕ್ಕ, ಅವಳ ಮಗ, ನನ್ನ ತಂಗಿ ಮಕ್ಕಳು ಎಲ್ಲರೂ ಬರುತ್ತಿದ್ದರು. ಆ ವೇಳೆಯಲ್ಲಿ ನನಗೆ, ಅಕ್ಕನಿಗೆ ಶಾಲೆಯ ಮೌಲ್ಯಮಾಪನ ಕೆಲಸ ಇರುತ್ತಿತ್ತು. ನನ್ನ ತಮ್ಮನ ಹೆಂಡತಿ-ಅವಳ ಅಕ್ಕ , ಮಕ್ಕಳ ದಂಡು ಕಟ್ಟಿಕೊಂಡು ಊರು ಸುತ್ತುತ್ತಿದ್ದರು. ಚಾಮುಂಡಿಬೆಟ್ಟ , ಜೂ ಮಾರ್ಕೆಟ್‌, ನಿಮಿಷಾಂಬ ದೇವಾಲಯ, ಹೊಟೇಲ್‌, ಸಿನಿಮಾ ಮುಂತಾದ ಕಡೆ ಕರೆದೊಯ್ಯುತ್ತಿದ್ದರು. ಹೊರಗೆ ಹೋಗುವ ಕಾರ್ಯಕ್ರಮವಿಲ್ಲದಿದ್ದಾಗ ಮನೆಯಲ್ಲೇ ಆಡುತ್ತಿದ್ದರು. ಕಣ್ಣುಮುಚ್ಚಾಲೆ, ಬಚ್ಚಿಟ್ಟಿದ್ದ ಸಾಮಾನುಗಳನ್ನು ಹುಡುಕುವುದು, ಯಾವುದಾದರೊಂದು ವಸ್ತು ವರ್ಣಿಸಿ ಆ ವಸ್ತು ಏನೆಂದು ಕೇಳುವುದು, ಕಲರ್‌ಕಲರ್‌ ವಾಟ್‌ ಕಲರ್‌- ಇತ್ಯಾದಿ ಆಟಗಳು ಅವರನ್ನು ಸದಾ ಚಟುವಟಿಕೆಯಲ್ಲಿರುವಂತೆ ಮಾಡುತ್ತಿದ್ದವು. 

ಈಗ ಅವಿಭಕ್ತ ಕುಟುಂಬಗಳಿಲ್ಲ . ರಜೆಗಳಲ್ಲಿ ತಾತ-ಅಜ್ಜಿಯರ ಊರಿಗೆ ಹೋಗುವ ಮಕ್ಕಳ ಸಂಖ್ಯೆಯೂ ಕಡಿಮೆಯಾಗಿದೆ. ಒಂದೊಂದು ಕುಟುಂಬಗಳೂ ದ್ವೀಪಗಳಂತಿವೆ. ಗಂಡ-ಹೆಂಡತಿ ಇಬ್ಬರೂ ದುಡಿಯಲು ಹೋಗಬೇಕು. ಮನೆಯಲ್ಲಿ ಮಕ್ಕಳನ್ನು ನೋಡಿಕೊಳ್ಳುವವರು ಯಾರೂ ಇಲ್ಲ. ಹೀಗಾಗಿ, ಅವರು ಬೇಸಿಗೆ ಶಿಬಿರಗಳ ಮೊರೆಹೋಗುತ್ತಿದ್ದಾರೆ.

ಎಲ್ಲವೂ ನಿಜ. ಆದರೆ, ಈಗಿನ ಮಕ್ಕಳಿಗೆ ಬಂಧುಗಳನ್ನು ಭೇಟಿಮಾಡುವ, ಅವರೊಡನೆ ಒಡನಾಡುವ, ಅಜ್ಜ ಹೇಳುವ ಕಥೆ ಕೇಳುತ್ತ, ಅಜ್ಜಿ ಹಾಕುವ ಕೈತುತ್ತು ತಿನ್ನುವ ಅವಕಾಶಗಳು ತಪ್ಪಿಹೋಗಿವೆ. ಎಲ್ಲರನ್ನೂ ಆಂಟಿ-ಅಂಕಲ್‌ ಎಂದು ಕರೆಯುವುದರಿಂದ ಚಿಕ್ಕಮ್ಮ-ಚಿಕ್ಕಪ್ಪ, ದೊಡ್ಡಮ್ಮ-ದೊಡ್ಡಪ್ಪ, ಮಾವ-ಅತ್ತೆ ಇಂತಹ ಸಂಬಂಧಗಳು ಅರ್ಥವಾಗುತ್ತಿಲ್ಲ. ಅವರಿಗೆ ಮನೆಯಲ್ಲಿ ನಡೆಯುವ ಸಮಾರಂಭಗಳು ಬೋರ್‌! ಒಟ್ಟಿಗೆ ಸೇರಿ ಹಬ್ಬ- ಹರಿದಿನಗಳನ್ನು ಆಚರಿಸುವುದು ಗೊತ್ತೇ ಇಲ್ಲ. ಹೀಗಿರುವಾಗ ಇಂದಿನ ಮಕ್ಕಳಿಗೆ ನಮ್ಮ ನಾಡು-ನುಡಿಯ ಪರಿಚಯವಾಗುವುದು ಹೇಗೆ ಸಾಧ್ಯ? 

ಸಿ.ಎನ್‌. ಮುಕ್ತಾ


ಇಂದು ಹೆಚ್ಚು ಓದಿದ್ದು

Trending videos

Back to Top