CONNECT WITH US  

ಭಾರತದ ಏಳು ಮಂದಿ ಇಂಜಿನಿಯರ್‌ಗಳ ಒತ್ತೆ

ಅಫ್ಘಾನಿಸ್ಥಾನದ ವಿದ್ಯುತ್‌ ಘಟಕದ ಸಿಬ್ಬಂದಿ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

ಕಾಬೂಲ್‌: ಅಫ್ಘಾನಿಸ್ಥಾನದ ಬಾಘÉನ್‌ ಪ್ರಾಂತ್ಯದಲ್ಲಿರುವ ವಿದ್ಯುತ್‌ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಏಳು ಭಾರತೀಯರು ಮತ್ತು ಒಬ್ಬ ಆಫ್ಗನ್‌ ನಾಗರಿಕನನ್ನು ಭಾನುವಾರ ಶಸ್ತ್ರ ಸಜ್ಜಿತ ಬಂಡುಕೋರರು ಅಪಹರಿಸಿದ್ದಾರೆ. ಈ ಸಂಬಂಧ ಭಾರತೀಯ ವಿದೇಶಾಂಗ ಸಚಿವಾಲಯವು ಅಫ್ಘಾನಿಸ್ಥಾನ ಸರಕಾರದೊಂದಿಗೆ ಸಂಪರ್ಕದಲ್ಲಿದೆ.

ಅಪಹೃತ ಭಾರತೀಯರು ಇಲ್ಲಿನ ವಿದ್ಯುತ್‌ ಘಟಕದಲ್ಲಿ ಇಂಜಿನಿಯರುಗಳಾಗಿ ಕೆಲಸ ಮಾಡುತ್ತಿದ್ದರು. ಈವರೆಗೆ ಯಾವುದೇ ಉಗ್ರ ಸಂಘಟನೆ ಈ ಕೃತ್ಯದ ಹೊಣೆ ಹೊತ್ತುಕೊಂಡಿಲ್ಲ. ಆದರೆ ಇದರ ಹಿಂದೆ ತಾಲಿಬಾನ್‌ ಕೈವಾಡವಿರುವ ಶಂಕೆಯಿದೆ. ಅಪಹೃತರ ಶೋಧ ಕಾರ್ಯ ನಡೆದಿದೆ. ಮೂಲಗಳ ಪ್ರಕಾರ ಅಪಹೃತರನ್ನು ಹತ್ಯೆಗೈದಿಲ್ಲ ಎಂದು ಬಾಘÉನ್‌ ಪೊಲೀಸ್‌ ಇಲಾಖೆಯ ವಕ್ತಾರ ಜಬಿ ಉಲ್ಲಾ ಶುಜಾ ಹೇಳಿದ್ದಾರೆ. ಇದೇ ವೇಳೆ, ಸರ್ಕಾರಿ ಉದ್ಯೋಗಿಗಳು ಎಂದು ತಪ್ಪಾಗಿ ಭಾವಿಸಿ ಅಪಹರಿಸಲಾಗಿದೆ ಎಂದು ಉಗ್ರರು ಸ್ಥಳೀಯರಲ್ಲಿ ಹೇಳಿಕೊಂಡಿರುವುದಾಗಿ ಆಫ್ಗನ್‌ ಮಾಧ್ಯಮಗಳು ವರದಿ ಮಾಡಿವೆ.

ಭಾರತೀಯರು ಕೆಇಸಿ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ ಎಂಬ ಕಂಪೆನಿಯ ಉದ್ಯೋಗಿಗಳಾಗಿದ್ದು, ಪುಲ್‌ ಎ ಖೊಮ್ರೆ ಎಂಬ ಪ್ರದೇಶದಲ್ಲಿ ಕಂಪೆನಿಯ ಉಪಘಟಕವಿದ್ದುದರಿಂದ, ಅಲ್ಲಿಗೆ ತೆರಳುತ್ತಿರುವಾಗ ಅಪಹರಣ ಮಾಡಲಾಗಿದೆ. ಅಫ್ಘಾನಿಸ್ತಾನದ ವಿದ್ಯುತ್‌ ವಿತರಣೆ ಕಂಪೆನಿ ಡಾ ಅಫ್ಘಾನಿಸ್ಥಾನ್‌ ಬ್ರೆಶಾ ಶೆರ್ಕತ್‌ ಈ ಕೆಇಸಿ ಕಂಪೆನಿಯೊಂದಿಗೆ ವಿದ್ಯುತ್‌ ಉತ್ಪಾದನೆ ಸಹಕಾರ ಒಪ್ಪಂದ ಹೊಂದಿದೆ. ಈ ಕೆಇಸಿ ಭಾರತ ಮೂಲದ ಕಂಪೆನಿಯಾಗಿದ್ದು, ಇದರ ನಿರ್ದೇಶಕ ಹರ್ಷ್‌ ಗೋಯೆಂಕಾ ಅವರು ನೌಕರರನ್ನು ರಕ್ಷಿಸುವಂತೆ ಸರಕಾರವನ್ನು ವಿನಂತಿಸಿಕೊಂಡಿದ್ದಾರೆ. ಅಪಹೃತರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

2016ರಲ್ಲಿ 40 ಭಾರತೀಯರನ್ನು ಕಾಬೂಲ್‌ನಲ್ಲಿ ಅಪಹರಿಸಲಾಗಿತ್ತು. 40 ದಿನಗಳ ನಂತರ ಭಾರತದ ಸರಕಾರದ ಮಧ್ಯಸ್ಥಿಕೆಯಿಂದಾಗಿ ಇವರನ್ನು ಬಿಡುಗಡೆ ಮಾಡಲಾಗಿತ್ತು. ಬಡತನ ಹಾಗೂ ನಿರುದ್ಯೋಗದಿಂದಾಗಿ ಸ್ಥಳೀಯರನ್ನು ಅಪಹರಿಸುವುದು ಮತ್ತು ದರೋಡೆ ನಡೆಸುವುದು ಅತ್ಯಂತ ಸಾಮಾನ್ಯ ಕೃತ್ಯವಾಗಿದೆ ಎಂದು ಹೇಳಲಾಗಿದೆ.


ಇಂದು ಹೆಚ್ಚು ಓದಿದ್ದು

Trending videos

Back to Top